Saturday, April 19, 2025
Google search engine

Homeಸ್ಥಳೀಯಕಸ ವಿಲೇವಾರಿ ಘಟಕಕ್ಕೆ ಸಾಗುವಳಿ ಜಮೀನು ಮಂಜೂರು: ರೈತರ ಪ್ರತಿಭಟನೆ

ಕಸ ವಿಲೇವಾರಿ ಘಟಕಕ್ಕೆ ಸಾಗುವಳಿ ಜಮೀನು ಮಂಜೂರು: ರೈತರ ಪ್ರತಿಭಟನೆ

ಗುಂಡ್ಲುಪೇಟೆ: ನಿಟ್ರೆ ಗ್ರಾಪಂ ವ್ಯಾಪ್ತಿಯ ರೈತರೊಬ್ಬರ ಸಾಗುವಳಿ ಜಮೀನನ್ನು ಪಂಚಾಯಿತಿಯವರು ಒತ್ತುವರಿ ಮಾಡಿಕೊಂಡು ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಯ ತಾಲೂಕು ಘಟಕದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಜಾಥಾ ಹೊರಟ ರೈತ ಸಂಘಟನೆ ಮುಖಂಡರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿ ನಂತರ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡು ನಿಟ್ರೆ ಗ್ರಾಪಂ ಅಧಿಕಾರಿಗಳು ಹಾಗು ತಾಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತ ಮುಖಂಡರು ಮಾತನಾಡಿ, ನಿಟ್ರೆ ಗ್ರಾಮದ ಸರ್ವೇ, ನಂ-293ರ ಜಮೀನಿನಲ್ಲಿ ರೈತ ಮಹದೇವೇಗೌಡ ಕಳೆದ 30 ವರ್ಷದಿಂದಲೂ ಉಳುಮೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ ಸಾಗುವಳಿಗಾಗಿ ಹಲವು ವರ್ಷದಿಂದಲೂ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಹೀಗಿದ್ದರೂ ಕೂಡ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ತಹಸೀಲ್ದಾರ್ 20 ಗುಂಟೆ ಜಾಗವನ್ನು ಮಂಜೂರು ಮಾಡಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ರೈತ ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ್ದರೂ ಕೂಡ ಕೃಷಿ ಜಮೀನನ್ನು ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತಹಸೀಲ್ದಾರ್ ಹಾಗೂ  ಜಿಲ್ಲಾಧಿಕಾರಿ ಮಂಜೂರು ಮಾಡಿಕೊಡಲು ಕಾರಣವೇನು ಎಂದು ಪ್ರಶ್ನಿಸಿ, ದೇಶಕ್ಕೆ ಅನ್ನ ಕೊಡುವ ರೈತನಿಂದ ಜಮೀನು ಕಸಿದುಕೊಳ್ಳಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ. ಘಟಕ ನಿರ್ಮಾಣಕ್ಕೆ ತೀರ ಅಗತ್ಯಬಿದ್ದರೆ ಕೃಷಿಗೆ ಯೋಗ್ಯವಲ್ಲದ ಭೂಮಿ ಈ ಭಾಗದಲ್ಲಿದ್ದು, ಅದನ್ನು ಬಳಕೆಮಾಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿ, ಕೂಡಲೇ ಈ ನಿರ್ಧಾರವನ್ನು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ ಆಗಮಿಸಿ ರೈತರ ಆಲಿಸಿ, ಈಗಾಗಲೇ ನಿಟ್ರೆ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ರೈತನಿಗೆ ಪೂರಕವಾಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆ ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಹಂಗಳ ದಿಲೀಪ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕಾರ್ಯಾಧ್ಯಕ್ಷ ರಾಜಶೇಖರ್, ಗೌರವಾಧ್ಯಕ್ಷ ಪಾಪಣ್ಣ, ಯುವ ಘಟಕ ತಾಲೂಕು ಸಂಚಾಲಕ ಶಿವಪುರ ಭರತ್, ರಘು, ಸ್ವಾಮಿ, ಬಸವೇಶ್, ಹಂಗಳ ಮಾಧು, ರೈತ ಮುಖಂಡ ಹೊನ್ನೇಗೌಡನಹಳ್ಳಿ ಶಿವಮಲ್ಲು ಸೇರಿದಂತೆ ಹಲವು ಮಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular