ರಾಮನಗರ: ಜೋಳಿಗೆ ಹಿಡಿದು ಸಹಸ್ರಾರು ಜನರನ್ನು ದುಶ್ಚಟಗಳಿಂದ ಮುಕ್ತಮಾಡಿದ ಬಾಗಲಕೋಟೆಯ ವಿರಕ್ತ ಮಠದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ತಮ್ಮ ಜೀವನವನ್ನು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಮುಡಿಪಾಗಿಟ್ಟಿದ್ದರು, ಸಮಾಜ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯಬೇಕೆಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಆಶಿಸಿದರು.
ಅವರು ಆ. ೧ರ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ೧೯೩೦ರ ಆ.೧ರಂದು ಜನಿಸಿದ ಡಾ. ಮಹಾಂತ ಶಿವಯೋಗಿಗಳು ಸಮಾಜ ಸುಧಾರಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವರು ಪ್ರಾರಂಭಿಸಿದ ಮಹಾಂತ ಜೋಳಿಗೆ ಯೋಜನೆ ಅತ್ಯಂತ ಪ್ರಮುಖವಾದದ್ದಾಗಿದೆ. ಕುಡಿತ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸ್ವಾಮೀಜಿಯವರು ಮನೆ ಮನೆಗಳಿಗೆ ತೆರಳಿ ತಂಬಾಕು, ಮದ್ಯಪಾನ ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಜನತೆಗೆ ಮನ ಮನಮುಟ್ಟುವಂತೆ ತಿಳುವಳಿಕೆ ನೀಡಿದರು. ಸ್ವಾಮಿಜಿಯವರ ಮಾತುಗಳಿಗೆ ಮನ ಕರಗಿ ಪರಿವರ್ತನೆಯಾದ ಸಹಸ್ರಾರು ಜನರು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿಯವರ ಜೋಳಿಗೆಗೆ ಹಾಕಿ, ಇನ್ನುಂದೆ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.
ಜೊತೆಗೆ ಶರಣ ಸಿದ್ಧಾಂತ ವಿದ್ಯಾಪೀಠದ ಶಿವಾನುಭವ ತರಬೇತಿ ಶಿಬಿರ? ಗಳನ್ನು ಏರ್ಪಡಿಸಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜಿಕ ಕಳಕಳಿ ಹೊಂದಿರುವ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮಾಡಿಸುವ ಮೂಲಕ ವ್ಯಸನಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು- ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದು ಹೇಳಿದರು.
ಮಾನಸಿಕ ಆರೋಗ್ಯ ವಿಭಾಗದ ಕಾರ್ಯಕರ್ತರಾದ ಪದ್ಮ ರೇಖಾ ಅವರು ಮಾತನಾಡಿ, ತಂಬಾಕು ಉತ್ಪನ್ನಗಳು, ಹಾಲ್ಕೋಹಾಲ್ ಮಿಶ್ರಿತ ಪೇಯಗಳು ಹಾಗೂ ಡ್ರಗ್ಸ್ ಮೊದಲಿಗೆ ಅಭ್ಯಾಸವಾಗಿ ನಂತರ ದುರಭ್ಯಾಸವಾಗಿ ಕೊನೆಯಲ್ಲಿ ವ್ಯಸನಕ್ಕೆ ಕಾರಣವಾಗುತ್ತವೆ, ಹೀಗೆ ವ್ಯಸನಿಗಳಾದವರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ವ್ಯಸನಕ್ಕೆ ಬಳಸುವ ರಾಸಾಯನಿಕಗಳು ಕೇಂದ್ರೀಯ ನರ ವ್ಯವಸ್ಥೆಯ ಮೇಲೆ ಮೊದಲು ದುಷ್ಪರಿಣಾಮ ಬೀರುತ್ತವೆ. ಮಾದಕ ವ್ಯಸನಿಗಳು ಸಮಾಜದಲ್ಲಿ ಒಬ್ಬಂಟಿಯಾಗಿ ಇರಲು ಪ್ರಯತ್ನಿಸುತ್ತಾರೆ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ, ಕೊನೆಗೊಂದು ದಿನ ಮಾನಸಿಕ ರೋಗಿಗಳಾಗುತ್ತಾರೆ.

ಇವರನ್ನು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಬಹುದು, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೂ ಮಾದಕ ವ್ಯಸನಿಗಳಿಗೆ ಅದನ್ನು ಬಿಡಿಸುವ ಹಾಗೂ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ ಎಂದರು.