ಗುಂಡ್ಲುಪೇಟೆ: ಗ್ರಾಮದ ಕೆರೆಗಳ ಪುನಶ್ಚೇತನಗೊಳಿಸಿ ಉಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೊತೆಗೆ ಸ್ಥಳೀಯರು ಕೆಲಸ ಮಾಡಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಮನವಿ ಮಾಡಿದರು.
ತಾಲೂಕಿನ ಶಿವಪುರ ವಲಯದ ಕೆಬ್ಬೆಪುರ ಗ್ರಾಮದ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರ ನಮ್ಮ ಕೆರೆ’ ಯೋಜನೆಯಡಿ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಗಳು ಗ್ರಾಮದ ಮೂಲ ಸ್ವತ್ತುಗಳಾಗಿವೆ. ಇದರಿಂದ ಜನಜೀವನಕ್ಕೆ ಸಾಕಷ್ಟು ಅನುಕೂಲತೆ ಇದೆ. ಹಲವು ಜೀವಿಗಳು ಜೀವಿಸುತ್ತವೆ. ಊರಿನಲ್ಲಿ ಶಾಲೆ, ದೇವಾಲಯ ಇರುವಂತೆ ಊರಿಗೆ ಒಂದು ಕೆರೆ ಇರಲೇಬೇಕು. ಊರಿನ ಜನರಿಗೆ, ದನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕೆರೆಯಿಂದ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ಕೆರೆಯನ್ನು ಯಾವುದೇ ಕಾರಣಕ್ಕೂ ಗಲೀಜು ಮಾಡದೆ ಸ್ವಚ್ಛವಾಗಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಕೆರೆಗೆ ಕಲುಷಿತ ನೀರನ್ನು ಬಿಡಬಾರದು, ತ್ಯಾಜ್ಯ ವಸ್ತುಗಳನ್ನು ಕೆರೆ ಅಂಗಳದಲ್ಲಿ ಹಾಕಿ ನೀರು ಮಲಿನ ಮಾಡಬಾರದು. ಕೆರೆಯು 8 ಎಕರೆಯಿದ್ದು, 3 ಎಕರೆಯಷ್ಟು ಹೂಳು ತೆಗೆಯಬಹುದಾಗಿದೆ. 3 ಸಾವಿರ ಟ್ರ್ಯಾಕ್ಟರ್ ಲೋಡು ಮಣ್ಣನ್ನು ರೈತರು ಒಯ್ಯಬಹುದಾಗಿದೆ. 300 ರಿಂದ 500 ಎಕರೆ ನೀರಾವರಿ ಸೌಲಭ್ಯ ಒದಗಿಸುವ ಕೆರೆಯಾಗಿದೆ ಎಂದು ಹೇಳಿದರು.
ಮನುಷ್ಯ ದುರಾಸೆಯಿಂದ ಕೆರೆ ಜಾಗ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅದು ಸಾರ್ವಜನಿಕ ಸ್ವತ್ತುವಾದ ಕಾರಣ ಎಲ್ಲರೂ ಉಳಿಸಿಕೊಳ್ಳಬೇಕು. ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ಸಾಕಷ್ಟು ಕೆರೆಗಳಿಗೆ ಜೀವ ತುಂಬಿದ್ದೇವೆ. ಅಲ್ಲದೇ ಯೋಜನೆಯು ಸಮಾಜ ಸೇವೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಗ್ರಾಮದ ಕೆರೆಯ ಹೂಳು ತೆಗೆದು ಶುದ್ದಿಕರಣದ ಅಗತ್ಯ ಅಭಿವೃದ್ಧಿ ಕೆಲಸಗಳ ಮೂಲಕ ಕೆರೆಗೆ ಜೀವ ತುಂಬುವ ಕೆಲಸ ಮಾಡಬೇಕಾಗಿದ್ದು, ನಾವು ನಿಮ್ಮೆಲ್ಲರ ಸಹಕಾರದಲ್ಲಿ ಮಾಡಿ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ತಾಲೂಕಿನ ಯೋಜನಾಧಿಕಾರಿ ಚಂದ್ರಶೇಖರ, ಕೆರೆ ಸಮಿತಿಯ ಅಧ್ಯಕ್ಷ ಕೆ.ವಿ.ಬಸಪ್ಪ, ಜಿಲ್ಲಾ ಜನಗೃತಿ ವೇದಿಕೆ ಸದಸ್ಯ ಮಹೇಂದ್ರ, ಮೈಸೂರು ಪ್ರಾದೇಶಿಕ ವಿಭಾಗದ ಕೆರೆ ಇಂಜಿನಿಯರ್ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್ವರಿ, ಆನಂದ, ಸಮಿತಿಯ ಸದಸ್ಯರು, ಮೇಲ್ವಿಚಾರಕ ದಿನೇಶ್ ಹೆಗ್ಡೆ, ಕೃಷಿ ಮೇಲ್ವಿಚಾರಕ ಪುಟ್ಟರಾಜು ಸೇರಿದಂತೆ ಸೇವಾಪ್ರತಿನಿಧಿಗಳು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಹಾಜರಿದ್ದರು.