ಮೈಸೂರು : ಕಬಿನಿ ಜಲಾಶಯದ ಮುಖ್ಯ ಭಾಗದಲ್ಲಿ ಯಾವುದೇ ಸೋರಿಕೆ ಇರುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಹಾಗೂ ಕಬಿನಿ, ವರುಣಾ ವಿಭಾಗದ ಅಧೀಕ್ಷಕ ಇಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.
ಕಬಿನಿ ಜಲಾಶಯದಲ್ಲಿ ನೀರಿನ ಸೋರುವಿಕೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಬಿನಿ ಜಲಾಶಯದ ಮುಖ್ಯ ಭಾಗದಲ್ಲಿ ಯಾವುದೇ ಸೋರಿಕೆ ಇರುವುದಿಲ್ಲ. ಕಬಿನಿ ಬಲದಂಡೆ ನಾಲೆಯ ಸ್ಫೂಯಿಸ್ ವಾಲ್‌ಗಳಲ್ಲಿ ಹಲವು ವರ್ಷಗಳಿಂದ ಸೋರಿಕೆ ಉಂಟಾಗುತ್ತಿದೆ. ಈ ಬಗ್ಗೆ ತಜ್ಞರ ಸಮಿತಿಯು ಪರಿವೀಕ್ಷಣೆ ನಡೆಸಿ ವರದಿ ನೀಡಿರುತ್ತದೆ.
ವರದಿಯಲ್ಲಿ ಹಿಂದಿನ ಮೂರು ವರ್ಷಗಳಿಂದ ಸೋರಿಕೆ ಉಂಟಾಗುತ್ತಿದ್ದು ಸೋರಿಕೆಯಿಂದ ಬರುವ ನೀರು ಸ್ವಚ್ಚವಾಗಿರುವುದನ್ನು ಗಮನಿಸಲಾಗಿರುತ್ತದೆ.
ಈ ಸೋರಿಕೆಯಿಂದ ಜಲಾಶಯದ ಸುರಕ್ಷತೆಗೆ ಯಾವುದೇ ಅಪಾಯ ಹಾಗೂ ಆತಂಕವಿಲ್ಲವೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಮತ್ತು ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಸಿ.ಸಿ ಟಿವಿಯನ್ನು ಅಳವಡಿಸಿ ನಿಯಮಿತವಾಗಿ ಪರಿವೀಕ್ಷಣೆ ನಡೆಸಲಾಗಿದ್ದು ಜಲಾಶಯದಲ್ಲಿ ನೀರಿನ ಸಂಗ್ರಹಣೆ ಹೆಚ್ಚಾದಂತೆ ಸ್ವಚ್ಚವಾದ ನೀರಿನ ಸೋರಿಕೆಯು ಹೆಚ್ಚಾಗುತ್ತಿದ್ದು, ಸಂಗ್ರಹಣೆ ಕಡಿಮೆಯಾದಂತೆ ಸೋರಿಕೆಯು ಕಡಿಮೆಯಾಗುತ್ತಿರುವುದನ್ನು ಗಮನಿಸಲಾಗಿರುತ್ತದೆ. ಡ್ರಿಪ್ ನೋಡಲ್ ಅಧಿಕಾರಿಯವರ ಸಲಹೆಯಂತೆ ಪರಿವೀಕ್ಷಣೆ ನಡೆಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಜು.೨೯ ರಂದು ಸೋರುವಿಕೆಯನ್ನು ಸರಿಪಡಿಸಲು ಪರಿವೀಕ್ಷಣೆ ನಡೆಸಿದ ಮುಳುಗು ತಜ್ಞರ ತಂಡವು ವರದಿಯೊಂದಿಗೆ ನೀಡಿರುವ ಅಂದಾಜು ಪಟ್ಟಿಯನ್ನು ಸ್ವೀಕರಿಸಲಾಗಿರುತ್ತದೆ. ಈ ಅಂದಾಜು ಪಟ್ಟಿಯನ್ನು ಪರಿಶೀಲಿಸಿ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಮಟ್ಟವು ಕಡಿಮೆಯಾದ ನಂತರ ಫೆಬ್ರವರಿ ೨೦೨೫ ಮತ್ತು ಮೇ ೨೦೨೫ರ ಅವಧಿಯಲ್ಲಿ ಈ ಕಾಮಗಾರಿಯನ್ನು ನುರಿತ ತಜ್ಞರ ಸಲಹೆಯೊಂದಿಗೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.