ಬೆಂಗಳೂರು: ಬ್ಯಾಚುಲರ್ ಪಾರ್ಟಿ ಕಾಪಿರೈಟ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ನಟ ರಕ್ಷಿತ್ ಶೆಟ್ಟಿ ಇಂದು ಶುಕ್ರವಾರ ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕೋರ್ಟ್ ನಲ್ಲಿ ಫೈಟ್ ಮಾಡ್ತೀನಿ, ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ ಎಂದು ಹೇಳಿದ್ದಾರೆ. ನಾನು ರಾಜಿಯಾಗಲ್ಲ. ಕಾನೂನು ಹೋರಾಟಕ್ಕೆ ಸಜ್ಜಾಗುತ್ತೇನೆ. ನಾವು ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಹಾಡುಗಳನ್ನ ಬಳಸಿರುತ್ತೇವೆ. ಕಾಪಿ ರೈಟ್ ಆಕ್ಟ್ ಏನು ಎಂಬುದು ಇನ್ನೂ ಯಾರಿಗೂ ಅರ್ಥ ಆಗಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ವಿಚಾರಣೆಗೆ ಕರೆದಿದ್ದರು. ಬಂದು ವಿಚಾರಣೆ ಎದುರಿಸಿದ್ದೇನೆ. ಕಾಪಿರೈಟ್ ಬಗ್ಗೆ ಸಿನಿಮಾ ರಂಗದವರಿಗೆ ಜ್ಞಾನ ಇಲ್ಲ. ನಾವು ಬಳಕೆ ಮಾಡಿರುವ ಹಾಡು ಹಕ್ಕು ಸ್ವಾಮ್ಯದ ಉಲ್ಲಂಘನೆ ಅಲ್ಲ. ಸಂಧರ್ಭಕ್ಕೆ ಬೇಕಾದಂತಹ ಹಿನ್ನಲೆಯಲ್ಲಿ ಒಂದು ಸಾಂಗ್ ೬ ಸೆಕೆಂಡ್ ಬಳಕೆಯಾಗಿದೆ. ಹಾಗಾದರೆ ಕನ್ನಡದ ಯಾವ ಹಾಡನ್ನು ಸಿನಿಮಾಗಳಲ್ಲಿ ಬಳಕೆ ಮಾಡುವಂತೆಯೇ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.
ಜುಲೈ ೧೫ರಂದು ರಕ್ಷಿತ್ ಶೆಟ್ಟಿ ವಿರುದ್ಧ ನವೀನ್ ಕುಮಾರ್ ಅವರು ದೂರು ನೀಡಿದ್ದರು. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನ್ಯಾಯ ಎಲ್ಲಿದೆ ಹಾಗೂ ಗಾಳಿಮಾತು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.