Sunday, April 20, 2025
Google search engine

Homeಸ್ಥಳೀಯಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳಿ

ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳಿ


ಮೈಸೂರು: ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿರುವುದರಿಂದ ಈ ರೋಗಗಳ ತಡೆಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್‌ಗಳು, ಬ್ಯಾರೆಲ್‌ಗಳು, ಏರ್‌ಕೂಲರ್, ತೊಟ್ಟಿ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ, ಡ್ರಮ್ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚುಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರು ಚಿಪ್ಪು, ಮರದ ಪೊಟರೆಗಳಲ್ಲಿ ಒಡೆದ ಬಾಟಲಿ ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ಬಾಟಲ್ ಮುಂತಾದವುಗಳನ್ನು ಸೂಕ್ತ ವಿಲೇವಾರಿ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಸ್ವಚ್ಛತೆ ಇಲ್ಲದ ಹೈ-ರಿಸ್ಕ್ ಏರಿಯಾಗಳನ್ನು ಗುರುತಿಸಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಡೆಂಗ್ಯೂ, ಚಿಕನ್‌ಗುನ್ಯಾಗಳು ಯಾವ ಏರಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದು ಗುರುತಿಸಿ ಆ ಏರಿಯಾಗಳಿಗೆ ಸ್ಯಾನಿಟೈಸೇಶನ್ ಮಾಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಂದಿಗಳನ್ನು ಸಾಕುವ ಸ್ಥಳಗಳಲ್ಲಿ ಕೊಳಚೆಯ ಪ್ರದೇಶಗಳು ನಿರ್ಮಾಣವಾಗುವುದರಿಂದ ಹಂದಿ ಸಾಕಾಣೆಗಾರರೊಂದಿಗೆ ಮಾತನಾಡಿ, ಅವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಹಂದಿ ಸಾಕಾಣಿ ಸ್ಥಳಗಳಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗದಂತೆ ಪರ್ಯಾಯ ಮಾರ್ಗ ವ್ಯವಸ್ಥೆ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾಗಳು ಕಂಡು ಬಂದರೆ ಸಂಬಂಧಪಟ್ಟ ವ್ಯಾಪ್ತಿಯ ವೈದ್ಯರಿಗೆ ಪಿ.ಡಿ.ಒಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಬೇಕು. ಮನೆಗಳಲ್ಲಿ ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ, ವಾಲ್‌ಸ್ಪ್ರೇ, ಮೊದಲಾದ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಕೃಷಿ ಹೊಂಡಾಗಳಲ್ಲಿ, ಕ್ವಾರೆಗಳಲ್ಲಿನ ಗುಂಡಿಗಳಲ್ಲಿ ಈಡಿಸ್ ಸೊಳ್ಳೆಗಳನ್ನು ಆಹಾರವಾಗಿ ಸೇವಿಸುವ ಮೀನುಗಳನ್ನು ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ್.ಎಸ್ ಮಾತನಾಡಿ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರಗಳು ವೈರಸ್‌ನಿಂದ ಉಂಟಾಗುವ ಕಾಯಿಲೆಗಳಾಗಿದ್ದು ಇವು ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಎಂದು ತಿಳಿಸಿದರು.
ಡೆಂಗ್ಯೂ ಜ್ವರ ಬಂದರೆ ವಿಪರೀತ ತಲೆನೋವು, ಕಣ್ಣು ಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಇವುಗಳು ಮಾರಣಾಂತಿಕವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದರು. ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತರು ತಿಂಗಳಿಗೊಮ್ಮೆ ಮನೆಮನೆಗಳನ್ನು ಭೇಟಿ ಮಾಡಿ ಮನೆಯ ಸುತ್ತಮುತ್ತಲಿರುವ ನಿಂತ ನೀರುಗಳನ್ನು ಪರಿಶೀಲಿಸಿ ಅದರಲ್ಲಿನ ಸೊಳ್ಳೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಸಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ತಾಲೂಕುಗಳ ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

೨೪೨ ಮಂದಿಗೆ ಡೆಂಗ್ಯೂ: ೨೦೧೭ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡುಬಂದಿಲ್ಲ. ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ೨೦೦೦ ಸ್ಯಾಂಪಲ್ ಪ್ರಕರಣಗಳನ್ನು ಸಂಗ್ರಹಿಸಲಾಗಿದ್ದು, ಖಾಸಗಿ ವಿಭಾಗದಲ್ಲಿ ೮೧ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಿಂದ ಯಾವುದೇ ಸಾವು ಆಗಿಲ್ಲ. ರಾಷ್ಟ್ರೀಯ ರೋಗವಾಹಕ ಹರಡುವ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೈಸೂರಿನ ಗ್ರಾಮೀಣ ಪ್ರದೇಶದಲ್ಲಿ ೨೫೮ ಡೆಂಗ್ಯೂ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ ೨೩ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಮೈಸೂರಿನ ನಗರದಲ್ಲಿ ೭೮೧ ಡೆಂಗ್ಯೂ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ೭೬ ಕೇಸ್‌ಗಳು ಪಾಸಿಟಿವ್ ಬಂದಿವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೨೬೩೬ ಡೆಂಗ್ಯೂ ಸ್ಯಾಂಪಲ್‌ಗಳಲ್ಲಿ ೨೪೨ ಕೇಸ್‌ಗಳು ಪಾಸಿಟಿವ್ ಬಂದಿದ್ದು, ಯಾವುದೇ ಸಾವು ಸಂಭವಿಸಿರುವುದಿಲ್ಲ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ್.ಎಸ್ ತಿಳಿಸಿದರು.

RELATED ARTICLES
- Advertisment -
Google search engine

Most Popular