Saturday, April 19, 2025
Google search engine

Homeರಾಜ್ಯಸುದ್ದಿಜಾಲಸ್ವಾತಂತ್ರೊತ್ಸವ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಸ್ವಾತಂತ್ರೊತ್ಸವ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಚಾಮರಾಜನಗರ: ಇದೇ ತಿಂಗಳ ಆಗಸ್ಟ್ ೧೫ರಂದು ಜಿಲ್ಲಾಕೇಂದ್ರದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೮ನೇ ಸ್ವಾತಂತ್ರೊತ್ಸವ ಆಚರಣೆ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಆರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯವರು ನಗರದಲ್ಲಿ ಸ್ವಾತಂತ್ರೊತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಸಂಘಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸಿದರು.

ಈ ಬಾರಿಯ ಸ್ವಾತಂತ್ರೊತ್ಸವವನ್ನು ವಿಶೇಷವಾಗಿ ಆಚರಿಸುವಂತಾಗಬೇಕು. ಚಾಮರಾಜನಗರ ಜಿಲ್ಲೆಯು ಉದಯವಾಗಿ ಆಗಸ್ಟ್ ೧೫ರಂದೇ ೨೭ ವರ್ಷಗಳನ್ನು ಪೂರೈಸುತ್ತಿರುವ ನಿಟ್ಟಿನಲ್ಲಿ ಕಾರ್ಯಕ್ರಮ ಚೆನ್ನಾಗಿ ನಡೆಯಬೇಕು. ಬಹುಮುಖ್ಯವಾಗಿ ಶಾಲಾ ಮಕ್ಕಳಿಗೆ ಸ್ವಾತಂತ್ರೊತ್ಸವದ ಅರಿವು ಮೂಡಿಸುವಂತಹ ಹಾಗೂ ದೇಶಭಕ್ತಿ ಬಿಂಬಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸರ್ಕಾರಿ ಶಾಲಾ-ಕಾಲೇಜು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿವಿಧ ಸಂಘಸಂಸ್ಥೆಗಳ ಮುಖಂಡರು ಸಲಹೆ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಗೀತಾ ಹುಡೇದ ಅವರು ಆಗಸ್ಟ್ ೧೫ರಂದು ಬೆಳಿಗ್ಗೆ ೯ ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಧ್ವಜಾ ಸಿದ್ದತಾ ಸಮಿತಿ, ವೇದಿಕೆ ಅಲಂಕಾರ ವ್ಯವಸ್ಥೆ ಸಮಿತಿ, ಸ್ವಚ್ಚತೆ ಮತ್ತು ಕುಡಿಯುವ ನೀರಿನ ಸಮಿತಿ ಸೇರಿದಂತೆ ಕಾರ್ಯಕ್ರಮ ಆಯೋಜನೆಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ರಚಿಸಲಾಗಿರುವ ಎಲ್ಲಾ ಸಮಿತಿಯಲ್ಲಿರುವ ಅಧಿಕಾರಿಗಳು ತಮಗೆ ವಹಿಸಿರುವ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ವೇದಿಕೆ ಕಾರ್ಯಕ್ರಮ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೊಲೀಸ್ ಪಥಸಂಚಲನ ಹಾಗೂ ಶಾಲಾಮಕ್ಕಳು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆಸಬೇಕು. ಕ್ರೀಡಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಅನ್ನು ಸನ್ನದ್ಧವಾಗಿಡಬೇಕು. ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಧ್ವಜ ನಿಯಂತ್ರಣಕ್ಕಾಗಿ ಎಲ್ಲಾ ಅರ್.ಟಿ.ಒ ಹಾಗೂ ಅಬಕಾರಿ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ನಡೆಸಬೇಕೆಂದು ಸೂಚಿಸಿದರು.

ಆಹ್ವಾನ ಪತ್ರಿಕೆಗಳನ್ನು ಶಿಷ್ಠಾಚಾರ ಪ್ರಕಾರವೇ ಮುದ್ರಿಸಿ ಎಲ್ಲಾ ಗಣ್ಯರಿಗೂ ವಿತರಿಸುವ ಕೆಲಸವಾಗಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸಿಹಿ ವಿತರಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಬ್ಯಾಂಕ್‌ಗಳಲ್ಲಿ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನಿಡಬೇಕು. ಎಲ್ಲಾ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಮಾಡಬೇಕು. ಒಟ್ಟಾರೆ ಎಲ್ಲಾ ಸಿದ್ದತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ತಿಳಿಸಿದರು.

RELATED ARTICLES
- Advertisment -
Google search engine

Most Popular