ಕಲ್ಪೆಟ್ಟಾ : ವಯನಾಡ್ ಭೂಕುಸಿತದ ನಂತರ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಲ್ವರು ಬಾಲಕರು ಮತ್ತು ಅವರ ಪೋಷಕರನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಕಲ್ಪೆಟ್ಟಾ ವ್ಯಾಪ್ತಿಯ ಅರಣ್ಯಾಧಿಕಾರಿ ಕೆ.ಹಶಿಸ್ ನೇತೃತ್ವದ ನಾಲ್ವರು ಸದಸ್ಯರ ತಂಡವು ಒಂದರಿಂದ ನಾಲ್ಕು ವರ್ಷದೊಳಗಿನ ನಾಲ್ಕು ಮಕ್ಕಳನ್ನು ಒಳಗೊಂಡ ಬುಡಕಟ್ಟು ಕುಟುಂಬವನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೆ ನಾಲ್ಕೂವರೆ ಗಂಟೆಗಳ ಕಾಲ ತೆಗೆದುಕೊಂಡಿತು. ಈ ಕುಟುಂಬವು ವಯನಾಡಿನ ಪನಿಯಾ ಸಮುದಾಯದ್ದಾಗಿದ್ದು, ಆಳವಾದ ಕಮರಿಯ ಮೇಲಿರುವ ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂದು ಹಶಿಸ್ ತಿಳಿಸಿದ್ದಾರೆ .
ತಾಯಿ ಮತ್ತು ನಾಲ್ಕು ವರ್ಷದ ಮಗು ಸೇರಿದಂತೆ ಇತರ ಮಕ್ಕಳು ಗುಹೆಯಲ್ಲಿ ಸಿಲುಕಿರುವ ಅವರ ತಂದೆಗೆ ಆಹಾರಕ್ಕಾಗಿ ಅಲೆದಾಡುತ್ತಿರುವುದು ನಮಗೆ ಕಂಡಿತ್ತು ಎಂದು ಹಶಿಸ್ ಹೇಳಿದ್ದಾರೆ.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳ ಕಡಿದಾದ ದಾರಿಯಲ್ಲಿ ಸಾಗಿ 8 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಗುಹೆಯಲ್ಲಿ ಸಿಲುಕಿದವರನ್ನು ಕಾಪಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕೇರಳ ಸಿಎಂ, “ಭೂಕುಸಿತ ಪೀಡಿತ ವಯನಾಡಿನಲ್ಲಿ ನಮ್ಮ ಧೈರ್ಯಶಾಲಿ ಅರಣ್ಯ ಅಧಿಕಾರಿಗಳು ದಣಿವರಿಯದ 8 ಗಂಟೆಗಳ ಕಾರ್ಯಾಚರಣೆಯ ನಂತರ ಆರು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಈ ದುರಿತ ಕಾಲದಲ್ಲಿ ಅವರ ಸಾಹಸದ ಕಾರ್ಯಗಳು ಕೇರಳ ಮತ್ತೆ ಪುಟಿದೇಳಬಹುದು ಎಂಬುದನ್ನು ತೋರಿಸುತ್ತದೆ. ಒಗ್ಗಟ್ಟಾಗಿ ನಾವು ಪುನರ್ನಿರ್ಮಾಣ ಮಾಡುತ್ತೇವೆ. ಮತ್ತಷ್ಟು ಶಕ್ತಿಶಾಲಿಯಾಗಿ ಎದ್ದು ನಿಲ್ಲುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾರೆ.
ಮಳೆಯ ಪ್ರಮಾಣ ಹೆಚ್ಚಾದಂತೆ ಅರಣ್ಯ ಇಲಾಖೆಯು ವಯನಾಡ್‌ನಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.