ಮಂಡ್ಯ : ದಿಕ್ಕು ತಪ್ಪಿಸಲು ಹೋಗಿ ಬಿಜೆಪಿ ಜೆಡಿಎಸ್ ಹಳ್ಳಕ್ಕೆ ಬಿದ್ದಿದೆ, ಬಿಜೆಪಿ-ಜೆಡಿಎಸ್ ಕೈಯಲ್ಲಿ ಗೆಲ್ಲಲು ಆಗಿಲ್ಲ ದಿನೇ ದಿನೇ ಕುಸಿಯುತ್ತಿದ್ದಾರೆ. ಇವರ ತರ ಚೋಚೋ ಸರ್ಕಾರ ಮಾಡಿದ್ರೆ ಆತಂಕ ಪಡೆಬೇಕಾಗಿತ್ತು ಎಂದು ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ವಾಗ್ದಾಳಿ ಮಾಡಿದ್ದಾರೆ.
ಇಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಸಚಿವರು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಎನ್.ಡಿ.ಎ ಮೈತ್ರಿ ಕೂಟದ ಅಪಪ್ರಚಾರ, ರಾಜ್ಯ ಸರ್ಕಾರದ ಸಿಎಂ ಹಾಗೂ ಡಿಸಿಎಂ ವಿರುದ್ಧ ಅಪಪ್ರಚಾರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೇಂದ್ರ ಮತ್ತು ಮೈತ್ರಿ ಕೂಟದ ಪಕ್ಷಗಳದ್ದೇ ಸಾಕಷ್ಟು ಹಗರಣಗಳಿವೆ ಹೀಗಾಗಿ ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆಯನ್ನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಯಾರ ಹಂಗಿಲ್ಲದೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗೂಡಿ ಜಾರಿಗೆ ತಂದಿರುವ ಜನಪರ ಯೋಜನೆಗಳ ಯಶಸ್ವಿಯನ್ನು ಸಹಿಸದೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ೨೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ವಹಿಸಲಾಯಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಶಾಸಕ ಕೆ.ಎಂ.ಉದಯ್ ಸೂಚನೆ ನೀಡಿದರು.