ಮಂಗಳೂರು (ದಕ್ಷಿಣ ಕನ್ನಡ): ರಾಜ್ಯವನ್ನು ಲೂಟಿ ಹೊಡೆಯಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನು ಸುತ್ತಿಕೊಂಡು, ಇದೀಗ ದಲಿತರ ಶೋಷಣೆಗೂ ನಿಂತಿದೆ. ಆ ಶೋಷಣೆ ಸಾವಿನ ಮಟ್ಟಕ್ಕೂ ತಲುಪಿರುವುದು ರಾಜ್ಯ ಕಂಡು ಕೇಳರಿಯದ ಪರಿಸ್ಥಿತಿಗೆ ತಲುಪಿದಂತಾಗಿದೆ ಎಂದು ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆಯಿಂದಾಗಿ ಬುಡಕಟ್ಟು ಸಮುದಾಯದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಗಳನ್ನು ಸರ್ಕಾರವೇ ಲೂಟಿ ಹೊಡೆಯಲು ನಿಂತಿದ್ದ ಪ್ರಕರಣ ಬೆಳಕಿಗೆ ಬಂತು.
ಮೊದಲಿಗೆ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದರೂ ವಿರೋಧ ಪಕ್ಷಗಳ ಸಮರ್ಥ ಹೋರಾಟ ಹಾಗೂ ಮಾಧ್ಯಮಗಳ ನಿರಂತರ ವರದಿಯ ಫಲವಾಗಿ ಸರ್ಕಾರದ ಮಂತ್ರಿಗಳು ರಾಜೀನಾಮೆ ಕೊಡುವಂತಾಯಿತು. ಮುಖ್ಯಮಂತ್ರಿಗಳು ಎಸ್ಐಟಿ ರಚಿಸಿ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದರೂ ಇ.ಡಿ ತನಿಖಾ ಸಂಸ್ಥೆ ಭ್ರಷ್ಟರ ಹೆಡೆಮುರಿ ಕಟ್ಟುತ್ತಿದೆ ಎಂದಿದ್ದಾರೆ.
ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ 25 ಸಾವಿರ ಕೋಟಿಗೂ ಅಧಿಕ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ನಿಯಮ ಬಾಹಿರವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡು ದಲಿತರಿಗೆ ಮಹಾ ಮೋಸ ಮಾಡಿದ್ದು ರಾಷ್ಟ್ರೀಯ ಪರಿಶಿಷ್ಟ ಜಾತಿ-ಪಂಗಡ ಆಯೋಗವು ಕೂಡ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ಕೋರುವ ಪತ್ರದ ಮೂಲಕ ಚಾಟಿ ಬೀಸಿದೆ. ಬಡ ದಲಿತ ಬಂಧುಗಳ ಉನ್ನತೀಕರಣಕ್ಕೆ ಮೀಸಲಿಟ್ಟ ನಾಡಿನ ಜನರ ಬೆವರಿನ ದುಡಿಮೆಯನ್ನು ಲೂಟಿಗೈಯುತ್ತಿರುವ ದಲಿತ ವಿರೋಧಿ ಕಾಂಗ್ರೆಸ್ಸಿಗೆ ಕೊಂಚವೂ ಮನಃಸಾಕ್ಷಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.