ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾವ ಪೊಲೀಸ್ ಬಳಿಯೂ ದುಡ್ಡು ಕೇಳಿಲ್ಲ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ತಿಳಿಸಿದ್ದಾರೆ.
ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಶಾಸಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಯಾವ ಪೊಲೀಸ್‌ಗೂ ದುಡ್ಡು ಕೇಳಿಲ್ಲ. ದುಡ್ಡಿನ ಬಗ್ಗೆ ಮಾತಾಡಿಲ್ಲ, ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಮಾತಾಡಿದ್ದೇನೆ. ಬೇರೆ ಯಾವ ವಿಷಯವೂ ನಾನು ಮಾತಾಡಿಲ್ಲ. ಪ್ರಕರಣವನ್ನು ನಮ್ಮ ಸರ್ಕಾರ ಸಿಐಡಿಗೆ ವಹಿಸಿದೆ. ತನಿಖಾ ವರದಿ ಬಂದ ಮೇಲೆ ಎಲ್ಲರಿಗೂ ಸತ್ಯಾಂಶ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಸಿಐಡಿ ವರದಿ ಬಂದ ಬಳಿಕ ಇದು ಷಡ್ಯಂತ್ರವೋ, ಅಲ್ಲವೋ ಎಂಬುವುದು ಬಹಿರಂಗವಾಗಲಿದೆ. ಕಾನೂನಿಗೆ ನಾನು ತಲೆ ಬಾಗುತ್ತೇನೆ. ಸಿಐಡಿ ಅವರ ವಿಚಾರಣೆಗೆ ಸಹಕರಿಸುತ್ತೇನೆ. ಸಿಎಂ ಅವರು ನಮ್ಮ ನಾಯಕರು, ಪಕ್ಷದ ಸಭೆಗೆ ಬರಲು ಹೇಳಿದ್ದರು. ಅದಕ್ಕೆ ಹೋಗಿದ್ದೆ. ಸಿಎಂಗೆ ನಾನು ಯಾವ ವಿಚಾರವೂ ತಿಳಿಸಲು ಹೋಗಿಲ್ಲ. ಅವರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಹೋಗಿರುತ್ತದೆ ಎಂದರು.