ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಂಚು ಮಾಡುತ್ತಿರುವ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಪಕ್ಷದ ವಿರುದ್ಧ ಆಗಸ್ಟ್ ೯ ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ೨ ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದು, ಮೈಸುರು ತಾಲ್ಲೂನಿಂದ ೧೦ ಸಾವಿರ ಜನ ಬರಲಿದ್ದಾರೆ ಎಂದು ಎಂ.ಡಿ.ಎ. ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಸಿದ್ದಾರ್ಥನಗರದಲ್ಲಿರುವ ಕನಕಭವನದಲ್ಲಿ ಮೈಸೂರು ತಾಲ್ಲೂಕು ಕುರುಬರ ಸಂಘದ ವತಿಯಿಂದ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಅಹಿಂದ ಮತ್ತು ಶೋಷಿತರ ವರ್ಗದ ನಾಯಕ ಸಿದ್ದರಾಮಯ್ಯರವರು ೨ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ನವರಿಗೆ ನುಂಗಲಾರದ ತುತ್ತಾಗಿದೆ. ಕಳೆದ ೪೫ ವರ್ಷಗಳ ಸಿದ್ದರಾಮಯ್ಯರವರ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಹಿಂದ ವರ್ಗದ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ.
ಮುಡಾ ಹಗರಣಕ್ಕೂ ಸಿದ್ದರಾಮಯ್ಯರವರಿಗೂ ಯಾವುದೇ ಸಂಬಂಧವಿಲ್ಲ. ಸೈಟಿಗೆ ಸಂಬಂಧಪಟ್ಟಂತೆ ಒಂದೇ ಒಂದು ಪತ್ರವನ್ನು ಬರೆದಿಲ್ಲ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲದಿದ್ದರೂ ಸಹ ಟಿ.ಜೆ. ಅಬ್ರಹಾಂ ಎಂಬ ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇಲೆ ದುರುದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು, ಸಿದ್ದರಾಮಯ್ಯರವರಿಗೆ ನೋಟಿಸ್ ನೀಡಿದ್ದಾರೆ.
ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ನಲ್ಲಿರುವ ಭ್ರಷ್ಟಾಚಾರಿಗಳೇ ಭ್ರಷ್ಠಾಚಾರದ ವಿರುದ್ಧ ವಾದ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ ಸಂಗತಿ. ಇಂತಹ ಗೊಡ್ಡು ಬೆದರಿಕೆಗಳಿಗೆ ಸಿದ್ದರಾಮಯ್ಯರವರು ಹೆದರಬೇಕಾಗಿಲ್ಲ. ರಾಜ್ಯದ ಅಹಿಂದವರ್ಗ ಶೋಷಿತ ವರ್ಗ ಸಿದ್ದರಾಮಯ್ಯರವರ ಬೆಂಬಲಕ್ಕೆ ನಿಂತಿದೆ ಎಂದ ಅವರು ಇದು ನಮ್ಮ ಅಳಿವು ಉಳಿವಿನ ಹೋರಾಟವಾಗಿದೆ. ೧೯೮೩ ರಿಂದಲೂ ಸಿದ್ದರಾಮಯ್ಯರವರ ಪರನಿಂತು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ ಈಗಲೂ ಸಹ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಊರಿನಿಂದಲೂ ಅಭಿಮಾನಿಗಳು, ಕಾರ್ಯಕರ್ತರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರೊಂದಿಗೆ ಸಿದ್ದರಾಮಯ್ಯರವರ ಕೈ ಬಲಪಡಿಸಬೇಕು ಎಂದರು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ ೧೩೬ ಜನ ಶಾಸಕರಿಂದ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಒಬ್ಬ ಭ್ರಷ್ಟ ಆರ್.ಟಿ.ಐ. ಕಾರ್ಯಕರ್ತ ನೀಡಿದ ಅರ್ಜಿಗೆ ರಾಜ್ಯಪಾಲರು ನೋಟೀಸ್ ನೀಡಿದ್ದಾರೆ ಎಂದರೆ ಅವರ ವಿರುದ್ಧ ಎಷ್ಟು ಕುತಂತ್ರ ನಡೆದಿದೆ ಎಂದು ಜನ ಅರ್ಥಮಾಡಿಕೊಳ್ಳಬೇಕು. ಈ ಕುತಂತ್ರಗಳನ್ನು ಎದುರಿಸುವ ಶಕ್ತಿಯನ್ನು ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರ ಮೂಲಕ ಎದುರಿಸಬೇಕಾಗಿದೆ ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ನಾಡನಹಳ್ಳಿ ರವಿ ಸಭೆಯಲ್ಲಿ : ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು, ಅಹಿಂದ ಮುಖಂಡರಾದ ಕೆ.ಎಸ್. ಶಿವರಾಂ, ಮುಖಂಡರಾದ ಪಟೇಲ್ ಜವರೇಗೌಡ ಕೋಟೆಹುಂಡಿ ಮಹಾದೇವ, ಶ್ರೀಕಂಠ ತೊಂಡೇಗೌಡ, ಕೆ.ಎಸ್. ಕರೀಗೌಡ, ರಾಜೇಶ್ವರಿ, ಕಮಲ ಛಾಯಾ, ಸೋಮಶೇಖರ್ ಅಪ್ಪುಗೌಡ, ಹುಯಿಲಾಳು ರಾಘವೇಂದ್ರ, ಬಿ. ಗುರುಸ್ವಾಮಿ, ಜೆ. ಸತೀಶ್ ಕುಮಾರ, ಶಿವಣ್ಣ ಹಾಜರಿದ್ದರು.