ಮದ್ದೂರು: ಮೈತ್ರಿ ಪಕ್ಷದ ಪಾದಯಾತ್ರೆ ನನಗೆ ವರಕೊಟ್ಟಂತೆ ಆಗಿದೆ. ಅವರ ವಿಚಾರಗಳನ್ನು ಅಕ್ರಮಗಳನ್ನು ಭ್ರಷ್ಟಾಚಾರಗಳನ್ನು ಜನರ ಮುಂದೆ ತೆರದಿಡುವ ಅವಕಾಶ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ‘ಜನಾಂದೋಲನ ಸಮಾವೇಶ’ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಅವರ ಕುಟುಂಬದಿಂದ ಇದು 20 ವರ್ಷದಿಂದ ಇದೂ ನಡೀತಾ ಇದೆ. ನನ್ನ ವಿರುದ್ದ ಇಡಿ, ಸಿಬಿಐ ಬಿಟ್ಟು ಏನಾದ್ರು ಸಿಗುತ್ತೆ ಅಂತಾ ಜಾಲಾಡ್ತಿದ್ದಾರೆ. ಇದ್ರಿಂದ ನನಗೇನು ತೊಂದರೆ ಇಲ್ಲ,ಇವರು ಅದನ್ನೇ ತಗೊಂಡು ಮಾಡ್ತಾರೆ ಮಾಡ್ಲಿ. ನನ್ನದು ತೆರದ ಪುಸ್ತಕ ಏನು ತೊಂದರೆ ಇಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಚಾಲೆಂಜ್ ನನ್ನು ಚರ್ಚೆ ಮಾಡ್ಲಿಕೆ ಅಸೆಂಬ್ಲಿಗೆ ಅವರೇ ಡೇಟ್ ಫಿಕ್ಸ್ ಮಾಡಿ ಬರಲಿ. ಅವರು ಅಸೆಂಬ್ಲಿ ಒಳಗೆ ಬರೋಕೆ ಆಗಲ್ಲ, ಹೀಗಾಗಿ ಅವರ ಸಹೋದರನನ್ನು ಕಳಿಸಲಿ ಎಂದು ಆಹ್ವಾನ ನೀಡಿದರು.
ಪೌರಾಡಳಿತ ಇಲಾಖೆ ಒಂದೇ ದಿನ 20 ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಇಲಾಖೆಗೆ ಸಂಬಂಧಪಟ್ಟಂತೆ ನಾನು 100 ಜನರನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಯಾವುದೇ ಲಂಚದ ಆರೋಪ ಬರಲ್ಲ, ಮಂತ್ರಿಗಳಿಗೆ ಇದರಲ್ಲಿ ಅವಕಾಶ ಇರುತ್ತೆ. ಇದು ಆಡಳಿತಾತ್ಮಕ ನಿರ್ಧಾರ ಎಂದು ಸಮರ್ಥಿಸಿಕೊಂಡರು.
ನಾನೇನು ಯಾವುದೇ ದಲಿತ ಕುಟುಂಬ ಹಾಳು ಮಾಡಿಲ್ಲ, ಬೇಕಿದ್ರೆ ಪಟ್ಟಿ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ವಿರೋಧ ಪಕ್ಷದವರ ಟೀಕೆಗೆ ಉತ್ತರಿಸಿದರು.