ಮೈಸೂರು : ವಯನಾಡು ದುರಂತದಲ್ಲಿ ನೂರಾರು ಮನೆಗಳು ಕೊಚ್ಚಿಹೋಗಿದ್ದು, ಕಾಂಗ್ರೆಸ್ ಪಕ್ಷ ೧೦೦ ಮನೆಗಳನ್ನು ನಿರ್ಮಿಸುವ ಘೊಷಣೆ ಹೊರಡಿಸಿದ ಬೆನ್ನಲ್ಲೇ, ತಾವು ಈ ನೂರು ಮನೆಗಳಿಗೂ ಉಚಿತ ವಿದ್ಯುತ್ ಕಾಮಗಾರಿ ನಡೆಸಿಕೊಡುವುದಾಗಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಆರ್. ಶ್ರೀಪಾಲ್ ಘೋಷಣೆ ಮಾಡಿದ್ದಾರೆ.
ವಯನಾಡು ಘೋರ ದುರಂತವು ನನ್ನ ಮನ ಕಲಕಿದೆ. ಅಲ್ಲಿನ ಜನರಿಗೆ ನೆರವಾಗುವುದು ಮಾನವೀಯತೆ ಇರುವ ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ ಅವರೊಂದಿಗೆ ವಯನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ೧೦೦ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ. ತಾವು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಆಗಿರುವ ಕಾರಣ ಈ ಎಲ್ಲ ೧೦೦ ಮನೆಗಳಿಗೆ ವಿದ್ಯುತ್ ಸಾಮಾಗ್ರಿಗಳನ್ನು ಪಕ್ಷದಿಂದ ಕೊಡಿಸಿದ್ದಲ್ಲಿ ತಾವು ಉಚಿತವಾಗಿ ಕಾಮಗಾರಿ ನಡೆಸುವುದಾಗಿ ಹೇಳಿದರು.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ತಮ್ಮ ಅಳಿಲು ಸೇವೆಯನ್ನು ಬಳಸಿಕೊಳ್ಳವಂತೆ ವಿನಂತಿಸಲಾಗಿದೆ ಎಂದು ತಿಳಿಸಿದರು.