ಕೊಳ್ಳೇಗಾಲ: ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಸಂಸದ ಸುನಿಲ್ ಬೋಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಹೊರ ವಲಯ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಮುಳ್ಳೂರು, ದಾಸನಪುರ, ಹರಳೆ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಸಂತ್ರಸ್ತರನ್ನು ಮಹದೇಶ್ವರ ಕಾಲೇಜು ಹಾಸ್ಟೆಲ್‌ನ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು.
ಕೊಳ್ಳೇಗಾಲಕ್ಕೆ ಆಗಮಿಸಿದ ಸಂಸದರು ಕಾಳಜಿ ಕೇಂದ್ರಕ್ಕೆ ಭೇಟಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ನಂತರ ನೆರೆ ಪೀಡಿತ ಗ್ರಾಮಗಳಾದ ದಾಸನಪುರ, ಮುಳ್ಳೂರು ಗ್ರಾಮಗಳಿಗೆ ಭೇಟಿ ನೀಡಿ ನದಿ ನೀರಿನ ಮಟ್ಟವನ್ನು ಪರಿಶೀಲಿಸಿ, ನಂತರ ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸಿದ ಸಂತ್ರಸ್ತರ ಮನೆಗಳಿಗೂ ಭೇಟಿ ನೀಡಿ ಸಂತ್ರಸ್ತರ ಬವಣೆಯನ್ನು ನೋಡಿ ಮರುಗಿದರು.
ಬಳಿಕ ಮಾತನಾಡಿ, ಪಟ್ಟಣದಲ್ಲಿರು ಆರು ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರನ್ನು ಇರಿಸಿ ಸುರಕ್ಷಿತವಾಗಿ ನೋಡಿಕೊಳ್ಳಲಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸಿದ ಎಲ್ಲಾ ಸಂತ್ರಸ್ತರಿಗೂ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪ ವಿಭಾಗೀಯ ಅಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ ದೊರೈರಾಜ್, ನಗರಸಭೆ ಸದಸ್ಯರಾದ ರಮೇಶ್, ಶಾಂತರಾಜು, ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ರಾಜೇಂದ್ರ, ಆನಂದ್ ಹಾಗೂ ಇನ್ನಿತರರು ಇದ್ದರು.