ಹನಗೋಡು: ಅರಣ್ಯ ನಾಶದಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಇದರಿಂದ ಮನುಷ್ಯನ ಜೀವನದ ಮೇಲೆ ನೇರ ದುಷ್ಟರಿಣಾಮ ಬೀರಲಿದೆ. ಅದ್ದರಿಂದ ಎಲ್ಲರೂ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕೆಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಮಳೆಯಾಗಿ, ನಾಡು ಮತ್ತು ರೈತರು ಸಂಮೃದ್ಧಿಯಿಂದ ಕೂಡಿರಲು ಅರಣ್ಯ ತುಂಬ ಅವಶ್ಯಕವಾಗಿದೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಮನೆಯ ಸುತ್ತ ಮುತ್ತ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಬೇಕು. ಪರಿಸರದಲ್ಲಿ ಮರಗಿಡಗಳ ಪ್ರಮಾಣ ಕಡಿಮೆ ಆದಂತೆ, ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಕಾಡಿನ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಅರಣ್ಯ ನಾಶದಿಂದಾಗಿ ವಾತಾವರಣದ ತಾಪಮಾನ ಹೆಚ್ಚಾಗಿ, ತಾಪದ ಝಳದಿಂದ ಎಲ್ಲಾ ಜೀವಿಗಳು ನರಳುತ್ತಿದ್ದು, ಜಮೀನಿನ ಬದುಗಳು ಕೆರೆಕಟ್ಟೆ ಏರಿ ಮತ್ತು ಅಂಗಳಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು, ಪೋಷಿಸಿ, ಸಂರಕ್ಷಣೆ ಮಾಡುವುದರಿಂದ ತಾಪದ ಝಳ ಕಡಿಮೆ ಆಗುವಂತೆ ಮಾಡಬಹುದು ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಲಸು, ನೇರಳೆ, ಮಹಾಗನಿ, ಸೀಬೆ, ಮಾವು ಮುಂತಾದ ಗಿಡಗಳನ್ನು ನೆಟ್ಟು, ಪ್ರತಿ ಗಿಡಗಳನ್ನು ಮಕ್ಕಳಿಗೆ ದತ್ತು ನೀಡಿ ನೀರು ಹಾಕಿ ಪೋಷಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ ಆರ್ ಎಫ್ ವೀರಭದ್ರಯ್ಯ,ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಅರಣ್ಯ ಇಲಾಖೆಯ ಕೃಷ್ಣಮಾದರ್, ಅಕ್ಷಯ್ ಕುಮಾರ್, ಕುಶಾಲ್ ಜಾದವ್, ಮಧು ಸೇರಿದಂತೆ ಶಾಲೆಯ ಸಹಶಿಕ್ಷಕರು,
ವಿದ್ಯಾರ್ಥಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.