ಬಳ್ಳಾರಿ: ಎಲ್ಲರಿಗೂ ಆರೋಗ್ಯದ ಭರವಸೆಯಂತೆ ಪ್ರತಿಯೊಬ್ಬರ ದೈಹಿಕ, ಮಾನಸಿಕ, ಸಾಮಾಜಿಕ ಸ್ಥಿರತೆಗಾಗಿ ನಿರಂತರವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ವೈದ್ಯರು ಹೊಂದಿದ್ದಾರೆ. ಅವರಿಗೆ ಸಾಂತ್ವನ ಹೇಳುವ ಮೂಲಕ ಉಚಿತ ಮಾನಸಿಕ ಸಹಾಯವಾಣಿ ಟೆಲಿಮ್ಯಾನಸ್ 14416 ಕುರಿತು ವ್ಯಾಪಕ ಪ್ರಚಾರ ಮಾಡುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಲ್.ಜನಾರ್ದನ್ ಹೇಳಿದರು. ನಗರದ ಡಾ. ರಾಜಕುಮಾರ್ ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಮಾನಸಿಕ ರೋಗಿಗಳ ಗುರುತಿಸುವಿಕೆ ಮತ್ತು ಚಿಕಿತ್ಸೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. 1996ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಕ್ರಮವಾಗಿ ದೇಶಾದ್ಯಂತ ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ರೋಗಿಗಳ ಗುರುತಿಸುವಿಕೆ, ಸಮಾಲೋಚನೆ, ಚಿಕಿತ್ಸೆ, ಮನೆಗೆ ಭೇಟಿ, ಕುಟುಂಬ ಸದಸ್ಯರ ಜವಾಬ್ದಾರಿಗಳು ಹೇಗೆ ಎಂಬ ಪ್ರಾಯೋಗಿಕ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಮಾದರಿಯನ್ನು ರಾಷ್ಟ್ರ ಮಟ್ಟದಲ್ಲಿ ಮುಂದುವರಿಸುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು. ಮಾನಸಿಕ ಖಾಯಿಲೆಗಳಾದ ಆತಂಕ, ಖಿನ್ನತೆ, ಗೀಳು, ಹಿಸ್ಟೀರಿಯಾ, ಸ್ಕಿಜೋಫ್ರೇನಿಯಾ ಮೊದಲಾದ ಕಾಯಿಲೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು. ಪ್ರತಿ ಮಂಗಳವಾರ ಸೈಕೋತನ್ಯ ಕಾರ್ಯಕ್ರಮದಡಿ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನಶಾಸ್ತ್ರಜ್ಞ ಡಾ. ಭುವನೇಶ್ವರಿ ದೇವಿ ನೇತೃತ್ವದಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಅರ್ಹರಿಗೆ ಉಚಿತ ಚಿಕಿತ್ಸೆ, ಸಲಹೆ ಮತ್ತು ಸರ್ಕಾರಿ ಮಾಸಾಶನಕ್ಕಾಗಿ ಯುಡಿಐಡಿ ಕಾರ್ಡ್ ಮಾಡಲಾಗುವುದು. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವೀರೇಂದ್ರಕುಮಾರ್ ಪ್ರಸ್ತಾವನೆಗೈದು ಮಾತನಾಡಿದರು. ಮನಶ್ಶಾಸ್ತ್ರಜ್ಞರಾಗಿರುವ ಡಾ. ಭುವನೇಶ್ವರಿ ದೇವಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪ, ಶಾಂತಕುಮಾರ್, ರಂಜಿತ, ಕಾವ್ಯ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.