ತಿ.ನರಸೀಪುರ : ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಸ್ಪಷ್ಟ ಜನಾದೇಶದಿಂದ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಕುತಂತ್ರ ರೂಪಿಸುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಕೂಟದ ನಾಯಕರು ನಾಡಿನ ಜನೆದೇಶದ ವಿರುದ್ಧವೇ ನಡೆದುಕೊಳ್ಳುತ್ತಿದ್ದಾರೆ ಎಂದು ಸಂಸದ ಸುನೀಲ್ ಬೋಸ್ ಟೀಕಿಸಿದ್ದಾರೆ.
ನಾಳೆ ಆ.೯ರ ಜನಾಂದೋಲನ ಸಮಾವೇಶದ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ಮುಡಾ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲದಿದ್ದರೂ ವಿಪಕ್ಷಗಳು ವಿನಾಕಾರಣ ರಾಜ್ಯದ ಮುಖ್ಯಮಂತ್ರಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿಯವರ ಪ್ರವೃತ್ತಿಗೆ ಕಡಿವಾಣ ಹಾಕುವ ಜನಾದೇಶದ ಸಂದೇಶ ಮೈಸೂರಿನಿಂದಲೇ ಹೋಗಬೇಕು. ಹೀಗಾಗಿ ನಾಳೆ ಶುಕ್ರವಾರ ನಡೆಯಲಿರುವ ಜನಾಂದೋಲನವನ್ನು ಐತಿಹಾಸಿಕವನ್ನಾಗಿಸಲು ಕಾರ್ಯಪ್ರವೃತ್ತರಾಗಬೇಕು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಸ್ವಚ್ಛ ಹಾಗೂ ಪ್ರಾಮಾಣಿಕ ಕಾಜಕಾರಣ ಮಾಡಿಕೊಂಡು ಬಂದಿರುವ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಏಕೈಕ ಉದ್ದೇಶದಿಂದ ಬಿಜೆಪಿ ಹಾಗೂ ಜಾ.ದಳ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಆಡಳಿತದ ಹೊರತಾದ ಯಾವುದೇ ರಾಜ್ಯದ: ಮುಖ್ಯಮಂತ್ರಿಗಳನ್ನೂ ಬಿಜೆಪಿ ಸುಮ್ಮನೆ ಬಿಟ್ಟಿಲ್ಲ. ಅವರ ಸರ್ವಾಧಿಕಾರ ಧೋರಣೆಗೆ ಮೈಸೂರಿನಿಂದಲೇ ಉತ್ತರ ನೀಡಬೇಕು. ಈ ಬೆಳವಣಿಗೆ ಬಗ್ಗೆ ಇಡೀ ದೇಶ ರಾಜ್ಯದತ್ತ ನೋಡುತ್ತಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ಮುನ್ನ ಅವರಿಗೆ ಕರ್ನಾಟಕ ರಾಜ್ಯದ ನೆನಪಾಗುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶವನ್ನು ಯಶಸ್ವಿ ಗೊಳಿಸಬೇಕು ಎಂದರು. ಸಮಾವೇಶಕ್ಕೆ ನಮ್ಮ ಕ್ಷೇತ್ರದಿಂದ ಜನರನ್ನು ಕರೆತರುವ ಜವಾಬ್ದಾರಿ ನಿಮ್ಮ ಮೇಲಿದೆ. ಜನರನ್ನು ಕರೆತರುವ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರು ಹೊರಬೇಕು ಎಂದು ಸೂಚನೆ ನೀಡಿದರು.