ಮೈಸೂರು: ಯಾವುದೇ ವಿಷಯ ಇಲ್ಲದೇ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡುತ್ತಿವೆ. ನನ್ನ ರಾಜಕೀಯ ಜೀವನವೇ ತೆರೆದ ಪುಸ್ತಕ,ನಾನು ಪ್ರಾಮಾಣಿಕನಾಗಿದ್ದೇನೆ ಎಂಬುದು ಎಲ್ಲರ ಅಭಿಪ್ರಾಯ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಇಂದು ಮಾಧ್ಯಮಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣಕ್ಕೂ ನನಗೂ ಏನು ಸಂಬಂಧ? ವಾಲ್ಮಿಕಿ ನಿಗಮದ ಹಗರಣದಲ್ಲಿ ಸತ್ಯಾಂಶ ಇಲ್ಲ ಅಂತಾ ಅವರಿಗೆ ಗೊತ್ತಿದೆ ಅದಕ್ಕಾಗಿ ಈಗ ಮುಡಾ ವಿಚಾರ ತೆಗದುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಮುಡಾ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಹಿಂದೆ ಕರ್ನಾಟಕ, ಮಧ್ಯ ಪ್ರದೇಶ ಸರ್ಕಾರ ಬೀಳಿಸಿದ್ದು ಯಾರು? ಅವರು ಕರ್ನಾಟಕದಲ್ಲಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದ್ರಾ? ನಾವು 2013 ಮತ್ತು 2023ರಲ್ಲಿ ಜನಾಶೀರ್ವಾದಿಂದ ಅಧಿಕಾರಕ್ಕೆ ಬಂದಿದ್ದೇವೆ. ಬಳಿಕ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿಯವರಿಗೆ ಧಮ್ ಇದ್ದರೇ ಗ್ಯಾರಂಟಿ ಸ್ಥಗಿತಗೊಳಿಸಿ ಎಂದು ಹೇಳಲಿ. ಬಿಜೆಪಿಯವರು ಪರೋಕ್ಷವಾಗಿ ಗ್ಯಾರಂಟಿ ವಿರೋಧ ಮಾಡುತ್ತಾರೆ ಎಂದರು.
ನನ್ನ ಪ್ರಕಾರ ಪ್ರಾಸಿಕ್ಯೂಷನ್ ಗೆ ಅವಕಾಶ ಕೊಡಲು ಬರುವುದಿಲ್ಲ
ಬೆಳಿಗ್ಗೆ 11.30ಕ್ಕ ಟಿಜೆ ಅಬ್ರಾಹಂ ದೂರು ನೀಡಿದ್ದರು. ರಾತ್ರಿ ವೇಳೆಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ರಾಜ್ಯಪಾಲರ ಮೇಲೆ ಒತ್ತಡ ಇರುವುದು. ನನ್ನ ಪ್ರಕಾರ ಪ್ರಾಸಿಕ್ಯೂಷನ್ ಗೆ ಅವಕಾಶ ಕೊಡಲು ಬರುವುದಿಲ್ಲ. ನನ್ನ ರಾಜಕೀಯ ಜೀವನವೇ ತೆರೆದ ಪುಸ್ತಕ. ನಾನು ಪ್ರಾಮಾಣಿಕವಾಗಿ ಇದ್ದೇನೆ ಎಂಬುದು ಎಲ್ಲರ ಅಭಿಪ್ರಾಯ. ಆ ಕಾರಣದಿಂದಲೇ ರಾಜ್ಯದ ಜನ ನಮಗೆ 135 ಸ್ಥಾನ ಕೊಟ್ಟಿದ್ದಾರೆ ಎಂದರು.