Saturday, April 19, 2025
Google search engine

Homeರಾಜ್ಯಸುದ್ದಿಜಾಲಗೋಕಾಕರು ಕನ್ನಡ ಭಾಷೆಯ ಮಹತ್ವ ಹೆಚ್ಚಿಸಿದವರು: ಸಾಹಿತಿ ಬನ್ನೂರು ರಾಜು

ಗೋಕಾಕರು ಕನ್ನಡ ಭಾಷೆಯ ಮಹತ್ವ ಹೆಚ್ಚಿಸಿದವರು: ಸಾಹಿತಿ ಬನ್ನೂರು ರಾಜು

ವರದಿ : ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳೆರಡರಲ್ಲೂ ಅದ್ಭುತ ಸಾಧನೆ ಮಾಡಿ ಸಾರಸ್ವತ ಲೋಕದಲ್ಲಿ ಕನ್ನಡ ಮತ್ತು ಕರ್ನಾಟಕದ ಮಹತ್ವ ಹೆಚ್ಚಿಸಿದ ವಿನಾಯಕ ಕೃಷ್ಣ ಗೋಕಾಕರು ಇಂಗ್ಲೆಂಡಿನ ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಕಲಿತು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊಟ್ಟ ಮೊದಲ ಭಾರತೀಯ ಎಂಬ ಕೀರ್ತಿಗಳಿಸಿದವರೆಂದು ಗೋಕಾಕರ ಸಾಹಿತ್ಯ ಸಾಧನೆಯನ್ನು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ. ರಾಜು ಗುಣಗಾನ ಮಾಡಿದರು.

ತಾಲ್ಲೂಕಿನ ಹೊಮ್ಮರಗಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಮತ್ತು ಮೈಸೂರು ನಗರದ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತ್ಯದಿಗ್ಗಜ ವಿ.ಕೃ.ಗೋಕಾಕರ ಜನ್ಮದಿನೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗೋಕಾಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಪರ ಹೋರಾಟ, ಬರಹ, ಭಾಷಣ, ಬೋಧನೆ, ಹೀಗೆ ಪ್ರತಿಯೊಂದರಲ್ಲೂ ಕನ್ನಡದ ಜೀವವಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1996ರಲ್ಲಿ ತಂದುಕೊಟ್ಟು ಕನ್ನಡದ ಹಿರಿಮೆಯನ್ನು, ಗರಿಮೆಯನ್ನು ಮೆರೆಸಿ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲಾ ಸಿದ್ದಿ- ಪ್ರಸಿದ್ಧಿಗಳನ್ನು ಪಡೆದು ಎಲ್ಲಾ ರೀತಿಯ ಕೀರ್ತಿ ಕಳಸಗಳಿಂದ ಕನ್ನಡಮ್ಮನ ಮಡಿಲನ್ನು ತುಂಬಿದ್ದರೆಂದರು.

ನಟಸಾರ್ವಭೌಮ ಡಾ.ರಾಜ್ ಕುಮಾರ್, ಸಾಹಿತ್ಯ ಸಾರ್ವಭೌಮ ಡಾ.ಪಾಟೀಲ ಪುಟ್ಟಪ್ಪ ಅವರುಗಳಂತಹ ಮೇರು ವ್ಯಕ್ತಿಗಳ ನೇತೃತ್ವದಲ್ಲಿ ಕನ್ನಡ ನಾಡಿನ ಉದ್ದಗಲಕ್ಕೂ ನಡೆದ ಗೋಕಾಕ್ ಚಳವಳಿಯನ್ನು ಕನ್ನಡ ನಾಡು ಯಾವತ್ತೂ ಮರೆಯುವಂತೆಯೇ ಇಲ್ಲ. ಕನ್ನಡಿಗರನ್ನು ಬಡಿದೆಬ್ಬಿಸಿದ ಅಂಥಾ ಶಕ್ತಿಯುತ ಚಳವಳಿ ಇದು. ಇದಕ್ಕೆ ಪ್ರೇರಕ ಶಕ್ತಿಯೇ ಗೋಕಾಕರು. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಭಾಷಾಭಿಮಾನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಕನ್ನಡದ ಕಿಚ್ಚನ್ನು, ಕೆಚ್ಚನ್ನು ಹೆಚ್ಚಿಸಿತು. ಹಾಗೆಯೇ ಗೋಕಾಕರು ಸ್ವತಃ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿ ಕನ್ನಡದ ಅಭಿವೃದ್ಧಿಗೆ, ಸಾಹಿತ್ಯ ಸಂಪತ್ತಿಗೆ ಕಾರಣೀಭೂತರಾಗಿದ್ದಾರೆ. ಅವರು ತಮ್ಮ ಕನ್ನಡ ಪರ ಹೋರಾಟ ಹಾಗೂ ಬರಹ ಮತ್ತು ಬೋಧನೆಗಳಿಂದ ಕನ್ನಡಕ್ಕೆ ಶಕ್ತಿ ತುಂಬಿದ್ದರು. ಅಂತೆಯೇ ಗೋಕಾಕ್ ವರದಿಯಲ್ಲಿ ಕನ್ನಡಕ್ಕೆ ಪ್ರಾಥ ಮಿಕ ಶಾಲಾ ಮತ್ತು ಪ್ರೌಢ ಶಿಕ್ಷಣದಲ್ಲಿ ಸಲ್ಲಬೇಕಾದ ಸ್ಥಾನಮಾನವನ್ನು, ಗೌರವವನ್ನು ಹಾಗೂ ಘನತೆಯನ್ನು ತಂದುಕೊಟ್ಟ ಇವರು ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದರೆಂದು ಹೇಳಿದರು.

ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವ ವಿದ್ಯಾರ್ಥಿನಿಯರಾದ ಆರ್.ನಿಧಿ, ಹಂಸಿಕಾ, ಹಾಗೂ ಸವಿತಾ ಅವರುಗಳಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕನ್ನಡ ಮತ್ತು ಇಂಗ್ಲೀಷ್ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಐಶ್ವರ್ಯ, ನಿರೂಪ, ಸಿಂಚನ (ಕನ್ನಡ), ರಂಜನಿ, ಪ್ರಪುಲ್ಲಾ, ಹಾಗೂ ಜ್ಞಾನವಿ (ಇಂಗ್ಲೀಷ್)ಅವರಿಗೆ ವಿಶ್ರಾಂತ ಶಿಕ್ಷಕ ಜಿ. ವಿ. ರಾಜುಶೆಟ್ಟಿ ಬಹುಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ಕಲಿಕೆಯ ಮಾರ್ಗದಲ್ಲಿರುವ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಿದ್ಧತೆ, ಬದ್ಧತೆ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಪರಿಶ್ರಮ,ಗ್ರಹಿಕೆ ಇವೆಲ್ಲಕ್ಕಿಂತ ಹೆಚ್ಚಾಗಿ ನಿರ್ದಿಷ್ಟ ಗುರಿ ಇರಬೇಕು.ಇವೆಲ್ಲವೂ ಇದ್ದಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಸುಲಭವಾಗಿ ಏರಬಹುದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಾರಂಭದಲ್ಲಿ ಉಪನ್ಯಾಸಕಿ ಹೆಚ್.ಕೆ.ಜಯಶ್ರೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಡಿ.ಪಿ. ಧರ್ಮಪ್ಪ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು. ಉಪನ್ಯಾಸಕರಾದ ಜಯಲಕ್ಷ್ಮಿ, ಯಶೋಧಾ, ಜಯಶ್ರೀ, ಜಯಂತಿ, ಹಳೆಯ ವಿದ್ಯಾರ್ಥಿಗಳ ಸಂಘದ ಗುರುಮೂರ್ತಿ ಇನ್ನಿತರರು ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಉಪನ್ಯಾಸಕಿ ಯಶೋಧಾ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular