Saturday, April 19, 2025
Google search engine

Homeರಾಜ್ಯಸುದ್ದಿಜಾಲಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳ ತೊಡಗುವಿಕೆ ಹೆಚ್ಚಲಿ

ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳ ತೊಡಗುವಿಕೆ ಹೆಚ್ಚಲಿ

ಯಳಂದೂರು: ಕ್ರೀಡೆಯು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ. ಇದರಿಂದ ದೇಹ ಸದೃಢವಾಗುವ ಜೊತೆಗೆ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಹಾಗಾಗಿ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಲು ಕ್ರೀಡೆಯಲ್ಲಿ ಮಕ್ಕಳ ತೊಡಗುವಿಕೆ ಹೆಚ್ಚಬೇಕು ಎಂದು ಮಾಂಬಳ್ಳಿ ಗ್ರಾ.ಪಂ ಅಧ್ಯಕ್ಷ ಮಲ್ಲೇಶ್ ಕರೆ ನೀಡಿದರು.

ಅವರು ಶುಕ್ರವಾರ ಸಂತೆಮರಹಳ್ಳಿ ಜೆಎಸ್‌ಎಸ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ಅಗರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಬಾರಿಯ ಅಗರ ಹೋಬಳಿ ಕ್ರೀಡಾಕೂಟದ ನೇತೃತ್ವವನ್ನು ಮಾಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-೦೧ ವಹಿಸಿದೆ. ಕ್ರೀಡೆಯಲ್ಲಿ ನಮ್ಮ ದೇಶ ಇನ್ನಷ್ಟು ಸಾಧನೆ ಮಾಡಬೇಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡೆಯಲ್ಲಿ ನಾವು ಇನ್ನು ಪ್ರಗತಿ ಕಾಣಬೇಕಿದೆ. ಈಗ ನಗರ ಪ್ರದೇಶದಲ್ಲಿ ಕ್ರೀಡಾ ಅಕಾಡೆಮಿಗಳು ಹೆಚ್ಚುತ್ತಿದ್ದು ಇದರಲ್ಲಿ ನಗರ ಪ್ರದೇಶ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಅಗತ್ಯವಾದ ಕಾಯವನ್ನು ಹೊಂದಿರುವ ಮಕ್ಕಳಿದ್ದರೂ ಸಹ ಅವರಿಗೆ ಸೂಕ್ತ ತರಬೇತಿಯ ಕೊರತೆ ಇದೆ. ಆದರೂ ಕೂಡ ಸಾಧನೆ ಮಾಡುವ ಛಲ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಇಂತಹ ಮಕ್ಕಳನ್ನು ಆಯ್ಕೆ ಮಾಡಿ ಇವರಿಗೆ ಸೂಕ್ತ ತರಬೇತಿಯನ್ನು ನೀಡಿ ಇವರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಸಲಹೆ ನೀಡಿದರು.

ಬಿಇಒ ಕಾಂತರಾಜು ಮಾತನಾಡಿ, ಯಳಂದೂರು ತಾಲೂಕಿನಲ್ಲಿ ಮೂರು ಹೋಬಳಿಗಳನ್ನು ಮಾಡಿಕೊಂಡು ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಕ್ರೀಡಾಕೂಟದಲ್ಲೂ ೮ ವೈಯುಕ್ತಿಕ ಕ್ರೀಡೆಗಳು ಹಾಗೂ ೪ ಸಾಮೂಹಿಕ ಕ್ರೀಡೆಗಳ ಆಯೋಜನೆ ಮಾಡಲಾಗಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಅವರು ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ನಮಗೆ ತಾಲೂಕು ಕೇಂದ್ರದಲ್ಲಿ ಮೈದಾನದ ಕೊರತೆ ಇರುವ ಕಾರಣ ಸಂತೆಮರಹಳ್ಳಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಮೂರು ಹೋಬಳಿ ಕ್ರೀಡಾಕೂಟಗಳು ನಡೆಯುತ್ತಿವೆ. ತಾಲೂಕು ಮಟ್ಟದ ವಾಲಿಬಾಲ್, ಥ್ರೋಬಾಲ್, ಖೋಖೋ ಹಾಗೂ ಕಬಡ್ಡಿ ಪಂದ್ಯಗಳನ್ನು ಬೇರೆ ಬೇರೆ ಶಾಲೆಗಳಲ್ಲಿ ಆಯೋಜನೆ ಮಾಡಿ, ಅಂತಿಮವಾಗಿ ನಡೆಯುವ ಅಥ್ಲೆಟಿಕ್ ಕ್ರೀಡೆಗಳನ್ನು ಈ ಶಾಲೆಯ ಆವರಣದಲ್ಲೇ ಆಯೋಜನೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ, ಶಾಲೆಯ ಟಿಪಿಒ ಶಾಂತರಾಜು, ಮುಖ್ಯ ಶಿಕ್ಷಕಿ ವಿಜಯಕುಮಾರಿ, ಪ್ರಕಾಶ್‌ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ಮಂಜುನಾಥ್, ಅಮ್ಮನಪುರ ಮಹೇಶ್ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular