ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಬುಡಕಟ್ಟು ಜನಾಂಗ ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಸಮುದಾಯದ ಸಹಕಾರ ಅತ್ಯಗತ್ಯವಿದೆ ಎಂದು ಪಿರಿಯಾಪಟ್ಟಣ ರೋಟರಿ ಕ್ಲಬ್ ಐಕಾನ್ಸ್ ಅಧ್ಯಕ್ಷ ಜೆ.ಎಸ್ ನಾಗರಾಜ್ ತಿಳಿಸಿದರು.
ವಿಶ್ವ ಬುಡಕಟ್ಟು ದಿನಾಚರಣೆ ಅಂಗವಾಗಿ ತಾಲ್ಲೂಕಿನ ಲಿಂಗಾಪುರ, ಮರಳುಕಟ್ಟೆ ಮತ್ತು ಬೆಮ್ಮತ್ತಿ ಹಾಡಿಗಳಿಗೆ ಭೇಟಿ ನೀಡಿ ಗಿರಿಜನರ ಸಮಸ್ಯೆ ಆಲಿಸಿ ಸಂಸ್ಥೆ ವತಿಯಿಂದ ಸಹಾಯ ಮಾಡುವ ಭರವಸೆ ನೀಡಿ ಅಂಗನವಾಡಿ ಮಕ್ಕಳು ಮತ್ತು ಗಿರಿಜನರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
ಸರ್ಕಾರಗಳು ಕೋಟ್ಯಾಂತರ ರೂಪಾಯಿ ಅನುದಾನವನ್ನು ಗಿರಿಜನರ ಅಭಿವೃದ್ಧಿಗೆಂದು ಮೀಸಲಿಡುತ್ತಿದೆ ಹಾಗೂ ವೆಚ್ಚ ಮಾಡುತ್ತಿದೆ ಆದರೆ ಇಲ್ಲಿನ ಹಾಡಿಗಳ ಜನರ ಪರಿಸ್ಥಿತಿ ನೋಡಿದರೆ ಅನುದಾನ ಎಲ್ಲಿ ಪೋಲಾಗುತ್ತಿದೆ ಎಂದು ಗಿರಿಜನರು ಪ್ರಶ್ನಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅವರು ಮುಖ್ಯ ವಾಹಿನಿಗೆ ಬಂದು ಶೈಕ್ಷಣಿಕ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ, ಬೆಮ್ಮತ್ತಿ ಹಾಡಿಯಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಗಿರಿಜನರಿಗೆ ಸರಿಯಾಗಿ ಒಂದು ಸೂರನ್ನು ನಾವು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲವೆಂದರೆ ನಾಗರಿಕ ಸಮಾಜ ತೆಲೆತಗ್ಗಿಸಬೇಕಾಗಿದೆ ಎಂದರು.

ರೋಟರಿ ಐಕಾನ್ಸ್ ಕಾರ್ಯದರ್ಶಿ ಬಿ.ಎಸ್ ಪ್ರಸನ್ನ ಕುಮಾರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ರೋಟರಿ ಐಕಾನ್ಸ್ ಎಲ್ಲರ ಸಹಕಾರದೊಂದಿಗೆ ತಾಲ್ಲೂಕಿನ ಗಿರಿಜನರ ಪರವಾಗಿ ನಿಂತು ಸರ್ಕಾರದಿಂದ ಹಾಗೂ ಸಂಘ ಸಂಸ್ಥೆಗಳಿಂದ ದೊರಕಬೇಕಾದ ಸೌಲಭ್ಯ ಒದಗಿಸಿಕೊಡಲು ಬದ್ಧವಾಗಿದೆ ಎಂದರು.
ಈ ಸಂದರ್ಭ ರೋಟರಿ ಐಕಾನ್ಸ್ ಸಂಸ್ಥೆ ಖಜಾಂಚಿ ಬಿ.ಆರ್ ಗಣೇಶ್, ನಿಕಟಪೂರ್ವ ಅಧ್ಯಕ್ಷ ಕೆ.ರಮೇಶ್, ಸದಸ್ಯರಾದ ಡಾ.ಶರತ್, ಡಿ.ಆರ್ ಧನಂಜಯ್, ಸಿ.ಎನ್ ವಿಜಯ್, ಬಿ.ಎಸ್ ಸತೀಶ್ ಆರಾಧ್ಯ, ರವಿಚಂದ್ರ ಬೂದಿತಿಟ್ಟು ಇದ್ದರು.