ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್ ಮಹದೇವಪ್ಪ ಹಾಗು ಕಾರ್ಯದರ್ಶಿಯಾಗಿ ಸೋಮಶೇಖರ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಪಿರಿಯಾಪಟ್ಟಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ರಾಮಚಂದ್ರ ಹಾಗೂ ಕಾರ್ಯದರ್ಶಿಯಾಗಿದ್ದ ಕೆ.ಎಸ್ ಮಹದೇವಪ್ಪ ಅವರ ಆಂತರಿಕ ಒಪ್ಪಂದದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್ ಮಹದೇವಪ್ಪ ಕಾರ್ಯದರ್ಶಿ ಸ್ಥಾನಕ್ಕೆ ಸೋಮಶೇಖರ್ ಅವಿರೋಧ ಆಯ್ಕೆಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು, ಈ ವೇಳೆ ಶಿಕ್ಷಕರು ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರನ್ನು ಸನ್ಮಾನಿಸಿ ಶುಭ ಕೋರಿದರು.
ನೂತನ ಅಧ್ಯಕ್ಷ ಕೆ.ಎಸ್ ಮಹದೇವಪ್ಪ ಅವರು ಮಾತನಾಡಿ ಅಧಿಕಾರ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನೂತನ ಕಾರ್ಯದರ್ಶಿ ಸೋಮಶೇಖರ್ ಅವರು ಮಾತನಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ನಿರ್ಗಮಿತ ಅಧ್ಯಕ್ಷ ರಾಮಚಂದ್ರ ಅವರು ಮಾತನಾಡಿ ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತಷ್ಟು ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭ ನಿರ್ದೇಶಕರಾದ ಸಂತೋಷ್, ಮಧುರೇಶ್, ಅನಿತಾ, ಜಾವಿದ್ ಪಾಷ, ಕುಮಾರಿ, ನಿಲ್ಲುಫರ್, ಪುಪ್ಪಮೇರಿ, ಯುವರಾಜ್, ಮಹದೇವಪ್ಪ, ಮಹೇಶ್, ಚಂದ್ರು, ಮಹೇಶ್, ಪತ್ತಿನ ಸಹಕಾರ ಸಂಘ ಅಧ್ಯಕ್ಷ ಶಿವಮೂರ್ತಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಈ.ಬಿ ವೆಂಕಟೇಶ್, ಶಿಕ್ಷಕರ ಬಳಕೆದಾರರ ಸಂಘದ ಅಧ್ಯಕ್ಷ ಪರಮಶಿವಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ ದೇವರಾಜ್, ಶಿಕ್ಷಕರಾದ ನಾಗೇಂದ್ರ ಆರಾಧ್ಯ, ನಿವೃತ್ತ ಶಿಕ್ಷಕ ವೃಷಭೇಂದ್ರಪ್ಪ, ಪುಟ್ಟರಾಜು ಮತ್ತಿತರಿದ್ದರು.