Monday, April 21, 2025
Google search engine

Homeರಾಜ್ಯ80,000 ಹೆಕ್ಟೇರ್ ಬೆಳೆ ನಾಶ: ವಾರದೊಳಗೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ ಭರವಸೆ

80,000 ಹೆಕ್ಟೇರ್ ಬೆಳೆ ನಾಶ: ವಾರದೊಳಗೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ ಭರವಸೆ

ಬೆಂಗಳೂರು: ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಒಟ್ಟಾರೆ ೮೦,೦೦೦ ಹೆಕ್ಟೇರ್ ಬೆಳೆ ನಾಶವಾಗಿದೆ. ಒಂದು ವಾರದೊಳಗಾಗಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.

ವಿಕಾಸಸೌಧದ ನಾಲ್ಕನೇ ಮಹಡಿಯ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಕೃಷಿ ಬೆಳೆ ೭೮,೬೭೯ ಹೆಕ್ಟೇರ್ ಹಾನಿಯಾಗಿದ್ದರೆ, ತೋಟಗಾರಿಕಾ ಬೆಳೆ ೨,೨೯೪ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ವಾರದೊಳಗೆ ಯಾವ ಯಾವ ಬೆಳೆಗಳು ಹಾನಿಯಾಗಿವೆ ಎಂಬ ಬಗ್ಗೆಯೂ ಖಚಿತ ಮಾಹಿತಿ ಸಿಗಲಿದೆ. ತದನಂತರ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು. ಪ್ರಸ್ತುತ ರಾಜ್ಯ ಸರ್ಕಾರದ ಬಳಿ ಇರುವ ಸಂಪನ್ಮೂಲದಲ್ಲೇ ಪರಿಹಾರ ನೀಡಲಾಗುವುದು. ಇನ್ನೂ ಒಂದೂವರೆ ತಿಂಗಳ ಮಳೆ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಗಾರಿನ ಸಂಪೂರ್ಣ ಅವಧಿ ಮುಗಿಯುವವರೆಗೆ ಕಾದು ತದನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವರ್ಷ ಬೆಳೆಹಾನಿ ಪ್ರಮಾಣವನ್ನು ನಿಯಂತ್ರಿಸಲಾಗಿದೆ. ೨೦೨೦ರಲ್ಲಿ ೨.೨೧ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ೨೦೨೧ರಲ್ಲಿ ೨.೧೨ ಲಕ್ಷ ಹೆಕ್ಟೇರ್ ಹಾಗೂ ೨೦೨೨ ರಲ್ಲಿ ೧.೫೩ ಹೆಕ್ಟೇರ್ ಬೆಳೆಹಾನಿಯಾಗಿತ್ತು. ಆದರೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ೮೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇನ್ನೂ ಒಂದೂವರೆ ತಿಂಗಳು ಮುಂಗಾರು ಅವಧಿ ಇರುವ ಕಾರಣ ಬಹಳ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಈ ವಿಚಾರವನ್ನು ನಿರ್ವಹಣೆ ಮಾಡಲಾಗುವುದು?? ಎಂದರು.

ಮನೆ ಸಂಪೂರ್ಣ ಹಾನಿಯಾದರೆ ೧,೨೦,೦೦೦ ರೂಪಾಯಿಯ ಜೊತೆಗೆ ಸರ್ಕಾರದಿಂದಲೇ ಒಂದು ಮನೆಯನ್ನೂ ನೀಡಲಾಗುತ್ತಿದೆ. ಈ ಕಾರ್ಯಗಳಿಗೆ ಈವರೆಗೆ ಒಟ್ಟು ೯.೨೧ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಮನೆಗೆ ನೀರು ನುಗ್ಗಿ ಸಣ್ಣಪುಟ್ಟ ಹಾನಿಯಾಗಿದ್ದರೆ ಅದನ್ನು ಸುಧಾರಿಸಲು ೨೮೦೦ ಮನೆಗಳಿಗೆ ೭೦ ಲಕ್ಷ ಹಣ ಪರಿಹಾರ ನೀಡಲಾಗಿದೆ. ದಿನಬಳಕೆ ವಸ್ತುಗಳಿಗೂ ೭೦ ಲಕ್ಷ ಪರಿಹಾರ ಸೇರಿ ಒಟ್ಟಾರೆ ೧.೪೦ ಕೋಟಿ ರೂ ಪರಿಹಾರ ನೀಡಲಾಗಿದೆ. ಅನಧಿಕೃತ ಮನೆಗಳಿಗೆ ಹಾನಿಯಾಗಿದ್ದರೆ ಅವರಿಗೂ ೧ ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗಿದೆ. ಮನೆ ಭಾಗಶಃ ಹಾನಿಯಾಗಿದ್ದರೆ ಎಸ್‌ಡಿಆರ್‌ಎಫ್ ನಿಯಮದ ಅಡಿಯಲ್ಲಿ ಕೇವಲ ೨,೫೦೦ ರೂಪಾಯಿ ಮಾತ್ರ ಪರಿಹಾರ ನೀಡಲು ಸಾಧ್ಯ. ಆದರೆ, ರಾಜ್ಯ ಸರ್ಕಾರದ ವತಿಯಿಂದ ೫೦,೦೦೦ ವರೆಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇನ್ನೂ ರಾಜ್ಯಾದ್ಯಂತ ಹಸು-ದನ ಸೇರಿದಂತೆ ೧೫೧ದೊಡ್ಡ ಜಾನುವಾರುಗಳು ಹಾಗೂ ೧೩೭ ಚಿಕ್ಕ ಜಾನುವಾರುಗಳು ಮೃತಪಟ್ಟಿವೆ. ಇದಕ್ಕೂ ಸಹ ೫೨.೯೮ ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೬೬೭ ಕೋಟಿ ರೂಪಾಯಿ ಇದ್ದು, ಪರಿಹಾರ ಕಾರ್ಯಗಳಿಗೆ ಸಾಕಷ್ಟು ಹಣ ಇದೆ. ಅಗತ್ಯವಿದ್ದರೆ ಮತ್ತಷ್ಟು ಹಣ ನೀಡಲೂ ಸಹ ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular