ವಿಶ್ವ ದಾಖಲೆಯ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ
ಮೈಸೂರು: ದೇಶ ಮೊದಲು ಎನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ದೇಶಕ್ಕಿಂತ ಮಿಗಿಲಾದ ಸಂಗತಿ ಇನ್ನೊಂದಿಲ್ಲ ಎಂದು ಮೈಸೂರು ಸಂಸದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನಗರದ ಪೂರ್ಣ ಚೇತನ ಶಾಲೆಯ ಒಂದರಿಂದ ಹತ್ತನೇ ತರಗತಿಯವರೆಗಿನ ಸುಮಾರು 530 ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ನಡೆಸಿದ ಐದು ನಿಮಿಷಗಳ ಕವಾಯತು ಹಾಗು ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12 ಮೀಟರ್ x 8 ಮೀಟರ್ ಅಳತೆಯ ಅತಿ ದೊಡ್ಡ ರಾಷ್ಟ್ರ ದ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸಿದರು. ಈ ವಿಶ್ವದಾಖಲೆಯ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.

ಈ ವಿದ್ಯಾರ್ಥಿಗಳು, ಪುನರ್ ಬಳಕೆಯ ಒರಿಗಾಮಿ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಬ್ಲೈಂಡ್ ಫೋಲ್ಡ್) ಐದು ನಿಮಿಷಗಳ ಕವಾಯತು ನಡೆಸಿ, ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಬಳಿಕ 2047ರಲ್ಲಿ ವಿಕಸಿತ ಭಾರತದ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಮೈಸೂರು-ಸ್ವಚ್ಛ ಭಾರತ ನಿರ್ಮಾಣದ ಸಂದೇಶವನ್ನು ಸಾರಿದರು. ಈ ಮೂಲಕ ಮೈಸೂರಿನಲ್ಲಿ ೭೮ನೇ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಶ್ರೀ ಕಾರ ಹಾಡಿದರು.
ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರು ವಿಕಸಿತ ಭಾರತದ ಕನಸನ್ನು ನಮಗೆ ನೀಡಿದ್ದಾರೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಯುವಕರ ಪಾತ್ರ ಅತಿ ಹಿರಿದಾದದ್ದು. ಮುಂದಿನ ಪ್ರಜೆಗಳಾದ ನೀವೆಲ್ಲರೂ ಈ ದೇಶಕ್ಕೆ ನಿಮಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ಎಂದು ಶ್ರೀ ಯದುವೀರ್ ಈ ಸಂದರ್ಭದಲ್ಲಿ ಕರೆ ನೀಡಿದರು.

“ಇಂದು ಭಾರತ ವಿಶ್ವಗುರುವಾಗಿ ಹೊರ ಹೊಮ್ಮುತ್ತಿದೆ. ಈ ದೇಶಕ್ಕಾಗಿ ನಾವು ಸದಾ ತ್ಯಾಗಮಯಿಗಳಾಗಬೇಕು,” ಎಂದು ಅವರು ತಿಳಿಸಿದರು.
“ಈ ದೇಶದ ಇತಿಹಾಸದಲ್ಲಿ ಮೈಸೂರಿಗೆ ಅತಿ ಪ್ರಮುಖ ಸ್ಥಾನವಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ಪೀಳಿಗೆ ಮೇಲಿದೆ,” ಎಂದು ಅವರು ತಿಳಿಸಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರಾದ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರರಾದ ಪಿ ಜಿ ಪ್ರತಿಭಾ ಅವರು ವಿಶ್ವ ದಾಖಲೆಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಈ ದೇಶದ ಭವಿಷ್ಯ ಬರೆಯಲು ಸಾಧ್ಯವಿರುವುದು ಇಂದಿನ ವಿದ್ಯಾರ್ಥಿಗಳಿಗೆ. ಅವರಲ್ಲಿ ದೇಶ ಪ್ರೇಮದ ಸಂಸ್ಕಾರ ಮೂಡಿಸುವುದು ನಮ್ಮ ಬಹು ಮುಖ್ಯ ಗುರಿ ಎಂದು ತಿಳಿಸಿದರು.
ಶಾಲೆಯ ಅಧ್ಯಕ್ಷ ಡಾ. ರಜನಿ ಎಂ ಆರ್ ಮಾತನಾಡಿ ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ದೇಶಪ್ರೇಮದ ಭಾವವನ್ನು ಪ್ರತಿ ಮಗುವಿನಲ್ಲೂ ಬಾಲ್ಯದಲ್ಲೇ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ವಿಶ್ವದಲ್ಲೇ ಭಾರತೀಯತೆಯ ಕಲ್ಪನೆಯಂತಹ ಇನ್ನೊಂದು ಪವಿತ್ರ ಕಲ್ಪನೆ ಇಲ್ಲ. ಇಂದಿನ ವಿದ್ಯಾರ್ಥಿಗಳಲ್ಲಿ ಭಾರತೀಯತೆಯ ಸಂಸ್ಕಾರ, ಕಲ್ಪನೆಯನ್ನು ಮೂಡಿಸಿ, ಅವರನ್ನು ದೇಶದ ಭವ್ಯ ಪ್ರಜೆಗಳಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಡೀನ್ ಲಾವಣ್ಯ, ಪ್ರಾಂಶುಪಾಲರಾದ ಪ್ರಿಯಾಂಕ ಬಿ ಉಪಸ್ಥಿತರಿದ್ದರು