ಹನಗೋಡು : ಲಕ್ಷಾಂತರ ರೂ, ಸಾಲ ಮಾಡಿಕೊಂಡಿದ್ದ ರೈತನೋರ್ವ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನಗೋಡಿಗೆ ಸಮೀಪದ ಹರೀನಹಳ್ಳಿಯಲ್ಲಿ ನಡೆದಿದೆ.
ಹನಗೋಡು ಹೋಬಳಿಯ ಹರೀನಹಳ್ಳಿಯ ಲೇ.ಸೋಮಶೇಖರ್‌ರವರ ಪುತ್ರ ಗುರು(೪೧)ಆತ್ಮಹತ್ಯೆ ಮಾಡಿ ಕೊಂಡವರು.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಎರಡು ಎಕರೆ ಭುಮಿ ಇದ್ದು, ವ್ಯವಸಾಯಕ್ಕಾಗಿ ಪಂಚವಳ್ಳಿಯ ಐಒಬಿ ಬ್ಯಾಂಕಿನಲ್ಲಿ ಐದು ಲಕ್ಷ, ಧರ್ಮಸ್ಥಳ ಸಂಸ್ಥೆ ವತಿಯಿಂದ ಮೂರು ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಮರಳಿಸಲು ಸಾಧ್ಯವಾಗದೇ ಮನೆಯಲ್ಲಿ ಪರಿತಪಿಸುತ್ತಾ, ನಾನು ಸಾಯುತ್ತೇನೆಂದು ಆಗಾಗ್ಗೆ ಹೇಳುತ್ತಿದ್ದರು. ನಾನು ಮನೆಯಲ್ಲಿ ಇಲ್ಲದ ವೇಳೆ ವಿಷ ಕುಡಿದು ಸಾವನ್ನಪ್ಪಿದ್ದಾರೆಂದು ಪತ್ನಿ ಅಶ್ವಿನಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಶವಸಂಸ್ಕಾರ ನಡೆಯಿತು. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.