ಯಳಂದೂರು: ಕುಮಾರಿ ಮಾನ್ಯ ಮಹೇಶ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಇತ್ತೀಚಿಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ವೈಭವಪೂರ್ಣವಾಗಿ ನಡೆಯಿತು.
ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರಿನವರು. ಅಮೆರಿಕಾದ ಪ್ರಸಿದ್ಧ ಭರತನಾಟ್ಯ ಗುರು ಶ್ರೀಮತಿ ಶೀಲಾ ರಾಮನಾಥ್ ರವರ ಬಳಿ ಅಭ್ಯಾಸ ಮಾಡಿ, ಆಗಮಿಸಿ, ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಸೇರಿದ್ದ ಜನಸಮೂಹದ ಮುಂದೆ ಅತ್ಯಂತ ವೈಭವಪೂರ್ಣವಾಗಿ ಭರತನಾಟ್ಯ ರಂಗಪ್ರವೇಶ ಮಾಡಿದರು.
ರಂಗವೇದಿಕೆಯಲ್ಲಿ, ಕುಮಾರಿ ಮಾನ್ಯ ಮಹೇಶ್ರ ನಾಟ್ಯಗುರು ಮತ್ತು ಸುಪ್ರಸಿದ್ಧ ಕಲಾವಾರಿಧಿ ಸಂಸ್ಥೆಯ ಅಧ್ಯಕ್ಷರೂ ಆದ ಶೀಲಾ ರಾಮನಾಥ್, ನಾಟ್ಯವರೇಣ್ಯ ಮತ್ತು ಹೆಸರಾಂತ ಚಲನಚಿತ್ರ ನಟರಾದ ಶ್ರೀಧರ್ ಜೈನ್, ವೈವಿಧ್ಯಪೂರ್ಣ ಕಲಾವಿದರು ಮತ್ತು ಸುಪ್ರಸಿದ್ದ ಲೇಖಕರೂ ಆದ ಬಾಗೂರು ಮಾರ್ಕಂಡೇಯರವರು ಮತ್ತು ಪೊಲೀಸ್ ಇಲಾಖೆಯ ಸಹ ಆಯುಕ್ತಾಧಿಕಾರಿಗಳಾದ ಸತೀಶ್ ರವರು ಉಪಸ್ಥಿತರಿದ್ದರು.
ಕುಮಾರಿ ಮಾನ್ಯ ಮಹೇಶ್ ತಮ್ಮ ಗುರುವಾದ ಶ್ರೀಮತಿ ಶೀಲಾ ರಾಮನಾಥ್ ಮತ್ತು ಭರತನಾಟ್ಯಾಚಾರ್ಯ ಶ್ರೀ ಶ್ರೀಧರ್ ಜೈನ್ ಮತ್ತು ಎಲ್ಲಾ ಗಣ್ಯರ ಮೆಚ್ಚುಗೆ ಮತ್ತು ಪ್ರಶಂಸೆಗೆ ಭಾಜನರಾದರು. ಕಲಾಮಂದಿರದಲ್ಲಿ ನೆರೆದಿದ್ದ ಅಪಾರ ಜನಸ್ತೋಮದಿಂದ ಕುಮಾರಿ ಮಾನ್ಯ ಮಹೇಶ್ ರ ನರ್ತನಗಳಿಗೆ, ಕರತಾಡನದ ಸುರಿಮಳೆ ಮತ್ತು ಹರ್ಷೋದ್ಗಾರದ ಕಲರವ ಮೊಳಗಿ ಕಲಾಮಂದಿರದ ಸೊಬಗು ಇಮ್ಮಡಿಯಾಯಿತು.