ಪಾಂಡವಪುರ : ಕೌಟುಂಬಿಕ ಕಲಹದ ಕಾರಣ ವರಮಹಾಲಕ್ಷ್ಮಿ ಹಬ್ಬದ ದಿನದಂದೇ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಟರಾಜ್ ಎಂಬಾತ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಪಟ್ಟಣದ ಶಾಂತಿನಗರ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಡಾಲರ್ ಕಾಲೋನಿಯಲ್ಲಿರುವ ನೀಲ್‌ಗಿರೀಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅನಿತಾ ಎಂಬವರೇ ಹಲ್ಲೆಗೀಡಾದ ಮಹಿಳೆ. ನಟರಾಜ್ ಮತ್ತು ಅನಿತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಅನಿತಾ ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ನಟರಾಜ ಹಿಂಬದಿಯಿಂದ ಬಂದು ಆಯುಧದಿಂದ ಹೊಡೆದನು, ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅನಿತಾ ಅವರನ್ನು ಕೂಡಲೇ ಮೈಸೂರಿನ ನಾರಾಯಣ ಆಸ್ಪತ್ರೆಗೆ ತರಲಾಯಿತು. ಈಕೆ ಜೀವನ್ಮರಣದ ನಡುವೆ ಹೋರಾಡುತಿದ್ದಾಳೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.