ಬೆಂಗಳೂರು: ರಾಜ್ಯದಲ್ಲಿ ದಾಂಧಲೆ, ಹಲ್ಲೆಗಳಾದ್ರೆ ರಾಜ್ಯಪಾಲರೇ ನೇರ ಹೊಣೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ರಾಜ್ಯದಲ್ಲಿ ದಾಂಧಲೆ, ಹಲ್ಲೆಗಳಾದ್ರೆ ರಾಜ್ಯಪಾಲರೇ ನೇರ ಹೊಣೆ, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್ ಏನೇ ಮಾಡಿದರೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ. ವರಿಷ್ಠರು, ರಾಜ್ಯದ ಏಳು ಕೋಟಿ ಜನ ಸಿಎಂ ಪರವಾಗಿ ಇದ್ದಾರೆ. ಏನಾದರೂ ಗಲಾಟೆ, ಹಲ್ಲೆಯಾದ್ರೆ ಅದಕ್ಕೆ ರಾಜ್ಯಪಾಲರೇ ಹೊಣೆ. ಕರ್ನಾಟಕದ ಜನ ಸುಮ್ಮನೆ ಕೂರಲ್ಲ ಎಂದರು.
ಹಿಂದುಳಿದ ವರ್ಗದ ನಾಯಕನಾಗಿರುವುದಕ್ಕೆ ಸಿಎಂ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಸಂವಿಧಾನ ವಿರುದ್ಧವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲೇ ಕಾಲದಲ್ಲಿ ೧೪ ನಿವೇಶನ ಕೊಟ್ಟಿದ್ದಾರೆ. ಸಿಎಂ ಪಾಪ್ಯುಲಾರಿಟಿ ಸಹಿಸಲಾಗದೆ ಸರ್ಕಾರ ತೆಗೆಯಲು ಯತ್ನಿಸಲಾಗುತ್ತಿದೆ. ಬಿಜೆಪಿಯವರಿಗೆ ಜನ ಯಾವತ್ತೂ ಬಹುಮತ ನೀಡಿಲ್ಲ ಎಂದು ಗುಡುಗಿದರು.