ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯೊಂದರಲ್ಲಿ ಬೆಸ್ಕಾಂ ಕಿರಿಯ ಎಂಜಿನಿಯರ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ್(22) ಆತ್ಮಹತ್ಯೆ ಮಾಡಿಕೊಂಡ ಸಹಾಯಕ ಕಿರಿಯ ಎಂಜಿನಿಯರ್. ಬೆಂಗಳೂರಿನ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದ ಸಹಾಯಕ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ಕೆಲಸದ ನಿಮಿತ್ತ ವೈಎನ್‍ಎಸ್ ಕೋಟೆಗೆ ತೆರಳಿದ್ದರು.
ಬಸ್‍ಗಳು ಸಿಗದೆ ಪಾವಗಡದ ಖಾಸಗಿ ವಸತಿ ಗೃಹದಲ್ಲಿ ಕೊಠಡಿಯನ್ನು ಪಡೆದು ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿದ್ದಾಗ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್‍ಗೆ ನೇಣು ಹಾಕಿಕೊಂಡಿರುವುದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದು ಪಾವಗಡ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.