Saturday, April 19, 2025
Google search engine

Homeರಾಜ್ಯಮೈಸೂರು ದಸರಾ ಮಹೋತ್ಸವಕ್ಕೂ ಆನೆಗೂ ಅವಿನಾಭಾವ ಸಂಬಂಧ-ಸಚಿವ ಈಶ್ವರ ಖಂಡ್ರೆ

ಮೈಸೂರು ದಸರಾ ಮಹೋತ್ಸವಕ್ಕೂ ಆನೆಗೂ ಅವಿನಾಭಾವ ಸಂಬಂಧ-ಸಚಿವ ಈಶ್ವರ ಖಂಡ್ರೆ

ಮೈಸೂರು: ದಸರಾ ನಮ್ಮ ನಾಡಹಬ್ಬವಾಗಿದ್ದು, ಮೈಸೂರು ದಸರಾ ಮಹೋತ್ಸವಕ್ಕೂ ಆನೆಗೂ ಅವಿನಾಭಾವ ಸಂಬಂಧವಿದೆ. ಜಂಬೂಸವಾರಿ ಈ ಮಹೋತ್ಸವದ ಪ್ರಧಾನ ಆಕರ್ಷಣೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಹುಣಸೂರು ಬಳಿಯ ವೀರನಹೊಸಹಳ್ಳಿಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಚಿವರಾದ ವೆಂಕಟೇಶ್ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಾಡಿನಿಂದ ನಾಡಿಗೆ ಆನೆಗಳ ಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಾಡಿನಿಂದ ನಾಡಿನತ್ತ ಕಳುಹಿಸುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಆಶ್ವಯುಜ ಶುದ್ಧ ದಶಮಿಯ ದಿನ ನಡೆಯುವ ಜಂಬೂಸವಾರಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ನೋಡಲು ದೇಶ ವಿದೇಶಗಳಿಂದಲೂ ಜನರು ಆಗಮಿಸುತ್ತಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.

ಈ ಬಾರಿಯೂ 58 ವರ್ಷ ವಯಸ್ಸಿನ ಅಭಿಮನ್ಯು ನಾಡದೇವಿ ಚಾಮುಂಡೇಶ್ವರಿ ವಿರಾಜಮಾನರಾದ ಚಿನ್ನದ ಅಂಬಾರಿ ಹೊರಲಿದ್ದಾನೆ, ಕಳೆದ ವರ್ಷ ನಿಶಾನೆ ಆನೆಯಾಗಿದ್ದ ಅರ್ಜುನ ಈ ಬಾರಿ ನಮ್ಮೊಂದಿಗಿಲ್ಲ ಎಂಬ ನೋವು ನಮಗಿದೆ. ಕಳೆದ ತಿಂಗಳು ನಾನು ಅರ್ಜುನ ಕಾಡಾನೆಯೊಂದಿಗೆ ಹೋರಾಡಿ ಮಡಿದ ಹಾಸನ ಜಿಲ್ಲೆ, ಯಸಳೂರು ಬಳಿ ಅರ್ಜುನನ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಅರ್ಜುನ ಆನೆ ಇದ್ದ ಆನೆ ಶಿಬಿರ ಬಳ್ಳೆಯಲ್ಲಿ ಕೂಡ ಒಂದು ಸ್ಮಾರಕ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

ಹಿಂದೆ ಮೈಸೂರಿನ ಅಂದಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮತ್ತು ಆಸ್ಥಾನದವರು ಎಚ್.ಡಿ.ಕೋಟೆ ತಾಲೂಕು ಅಂತರ ಸಂತೆ ಬಳಿಯ ಮಾಸ್ತಿ ಗುಡಿ ಮತ್ತು ಮಾಸ್ತಮ್ಮನ ದೇವಸ್ಥಾನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಾಂಪ್ರದಾಯಿಕವಾಗಿ ಗಜ ಪಯಣ ಆರಂಭವಾಗುತ್ತಿತ್ತು .

ಆಗ ಆನೆಗಳು ನಡೆದುಕೊಂಡು ಹೋಗುತ್ತಿದ್ದ ಮಾರ್ಗದ ಹಳ್ಳಿ- ಹಳ್ಳಿಯಲ್ಲೂ ಜನರು ತಳಿರು ತೋರಣ ಕಟ್ಟಿ, ರಂಗವಲ್ಲಿ ಹಾಕಿ, ಆನೆಗಳಿಗೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಕೊಟ್ಟು ಪೂಜಿಸುತ್ತಿದ್ದರು. ಆನೆಗಳು, ಮಾವುತರು, ಕವಾಡಿಗರ ಇಡೀ ಕುಟುಂಬ ಕಾಲ್ನಡಿಗೆಯಲ್ಲಿ ಮೈಸೂರಿಗೆ ಬರುತ್ತಿತ್ತು ಎಂದು ಕೇಳಿದ್ದೇನೆ. ಈಗ ಸಾಂಕೇತಿಕವಾಗಿ ಇಲ್ಲಿ ಆನೆಗಳು ಮತ್ತು ಮಾವುತರು ಸ್ವಲ್ಪ ದೂರ ಮಾತ್ರ ಹೆಜ್ಜೆ ಹಾಕಿದ ತರುವಾಯ ಲಾರಿಗಳಲ್ಲಿ ಆನೆಗಳನ್ನು ಮೈಸೂರಿಗೆ ಕಳುಹಿಸಲಾಗುತ್ತದೆ. ಆದರೂ ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಎಲ್ಲ ರೀತಿಯ ವಿಧಿ- ವಿಧಾನ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲು ಮತ್ತು ಹೆಚ್ಚುವರಿಯಾಗಿ ಆನೆಗಳನ್ನು ಕಾಯ್ದಿರಿಸಲೂ ಸೂಚಿಸಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು. ದಸರಾ ಮಹೋತ್ಸವ ಯಶಸ್ವಿಯಾಗಿ, ವಿಜೃಂಭಣೆಯಿಂದ ನೆರವೇರಲಿ. ಅಧಿದೇವತೆ ನಾಡದೇವಿ ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದ ರಾಜ್ಯದ ಮೇಲೆ ಇರಲಿ. ಉತ್ತಮ ಮಳೆ ಬೆಳೆ ಆಗಲಿ. ರಾಜ್ಯದಲ್ಲಿ ಸುಖ, ಸಮೃದ್ಧಿ ನೆಲೆಸಲಿ ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

RELATED ARTICLES
- Advertisment -
Google search engine

Most Popular