Saturday, April 19, 2025
Google search engine

Homeರಾಜ್ಯಸುದ್ದಿಜಾಲರೈತರು ಎಚ್ಚೆತ್ತುಕೊಳ್ಳದಿದ್ದರೆ ಅಂತರ್ಜಲ ಕುಸಿದು ಬೆಳೆಗಳ ಇಳುವರಿ ಕುಂಠಿತ: ರಮೇಶ್‌ಗೌಡ ಎಚ್ಚರಿಕೆ

ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಂತರ್ಜಲ ಕುಸಿದು ಬೆಳೆಗಳ ಇಳುವರಿ ಕುಂಠಿತ: ರಮೇಶ್‌ಗೌಡ ಎಚ್ಚರಿಕೆ

ಚನ್ನಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮುಂದಿನ ತಿಂಗಳ ಹಂಚಿಕೆ ನೀರು ಸೇರಿದಂತೆ ೫೦ ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಹರಿಸಿದ್ದು ಈ ನೀರು ಸಮುದ್ರದ ಪಾಲಾಗಿದೆ. ಆದರೆ ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಕೆರೆಗಳು ನೀರಿಲ್ಲದೆ ಬರಿದಾಗಿದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ವೇ ಕಾರಣ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ತಿಳಿಸಿದರು.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಗುರುವಾರ ನಡೆದ ೩೨೩ ನೇ ದಿನದ ಹೋರಾಟದ ಜೊತೆಗೆ ಕೆಆರ್‌ಎಸ್‌ನಿಂದ ಶಿಂಷಾ ನದಿಗೆ ನೀರು ಹರಿಸಲು ಅನುಮತಿ ಇದ್ದರೂ ಸಹ ಕಾವೇರಿ ನೀರಾವರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಜಿಲ್ಲೆಯ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗುರುವಾರ ತಾಲೂಕಿನ ಹೊಂಗನೂರು ಗ್ರಾಮದ ಕೆರೆ ಕೋಡಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೆಆರ್‌ಎಸ್ ಜಲಾಶಯಕ್ಕೆ ೮೦ ಅಡಿ ನೀರು ಸಂಗ್ರಹ ಆಗುತ್ತಿದ್ದಂತೆ ಮಂಡ್ಯ ಜಿಲ್ಲೆಗಳ ಕೆರೆಗಳಿಗೆ ನಾಲೆಗಳ ಮೂಲಕ ಕುಡಿಯುವ ನೀರು ಯೋಜನೆಯಡಿ ನೀರನ್ನು ಹರಿಸಬೇಕಿದೆ. ಮಂಡ್ಯ ಜಿಲ್ಲೆಯ ೬೪೦ ಕೆರೆಗಳಿಗೆ ನೀರು ಹರಿಸಿದರೆ ಎಲ್ಲಾ ಕೆರೆಗಳಿಗೆ ನೀರು ತುಂಬಿದ ಬಳಿಕ ಶಿಂಷಾ ನದಿಗೆ ನೀರು ಹರಿಸಿದ ಅಲ್ಲಿಂದ ತಾಲೂಕಿನ ಇಗ್ಗಲೂರು ಜಲಾಶಯಕ್ಕೆ ನೀರು ತುಂಬಿ ಅಲ್ಲಿಂದ ತಾಲೂಕಿನ ೧೮೦ ಕೆರೆಗಳಿಗೆ ನೀರು ತುಂಬಿಕೊಳ್ಳಬೇಕಿದೆ. ಆದರೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಸಿದ್ದು ಜೊತೆಗೆ ಮುಂದಿನ ತಿಂಗಳ ಹಂಚಿಕೆ ನೀರನ್ನು ಸಹ ಹರಿಸಲಾಗಿದ್ದು ಅಲ್ಲಿನ ಡ್ಯಾಂಗಳು ಭರ್ತಿಯಾಗಿ ೫೦ ಟಿಎಂಸಿಗೂ ಹೆಚ್ಚು ನೀರು ಸಮುದ್ರದ ಪಾಲಾಗಿದೆ. ಇತ್ತ ಈಗಾಗಲೆ ಕೆಆರ್‌ಎಸ್ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆ ಆಗಿದ್ದು ತಮಿಳುನಾಡಿನವರು ಮತ್ತೊಂದು ತಿಂಗಳ ನೀರನ್ನು ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಮಂಡ್ಯ ಮತ್ತು ರಾಮನಗರ ಜಿಲ್ಲೆಯ ೮೨೦ ಕೆರೆಗಳು ನೀರಿಲ್ಲದೆ ಬರಿದಾಗಿವೆ. ಇದಕ್ಕೆ ಕಾರಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಕಾರಣವಾಗಿದೆ ಎಂದು ರಮೇಶ್‌ಗೌಡರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಸ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಮಳೆ ಆಗದಿದ್ದರೆ ಅಂತರ್ಜಲ ಮತ್ತಷ್ಟ ಕುಸಿಯುತ್ತದೆ. ಇದರಿಂದ ರೇಷ್ಮೆ, ತೆಂಗು, ಬಾಳೆ, ಮಾವು, ಹೈನೋದ್ಯಮ ಎಲ್ಲವೂ ಇಳುವರಿ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್‌ಅವರು ಆಮೆಗತಿಯಲ್ಲಿ ಸಾಗುತ್ತಿರುವ ಸತ್ತೇಗಾಲ ಯೋಜನೆಗೆ ವೇಗ ನೀಡಿ ಕಾಮಗಾರಿ ಮುಗಿಸಿದರೆ ೩.೩ ಟಿಎಂಸಿ ನೀರು ಇಗ್ಗಲೂರು ಜಲಾಶಯಕ್ಕೆ ಬರಲಿದ್ದು ಇದರಿಂದ ರಾಮನಗರ ಜಿಲ್ಲೆಯ ೫೬೦ ಕೆರೆಗಳಿಗೆ ನೀರು ತುಂಬಿಕೊಳ್ಳಬಹುದು. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆಶಿ ಅವರು ಸತ್ತೇಗಾಲ ಯೋಜನೆ ಬಗ್ಗೆ ಗಮನ ನೀಡಬೇಕು ಎಂದು ರಮೇಶ್‌ಗೌಡರು ಒತ್ತಾಯಿಸಿದರು.

ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಶಾಸಕರು ಇಲ್ಲವಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಜಿಡ್ಡು ಹಿಡಿದಿದ್ದಾರೆ. ಅಧಿಕಾರಿಗಳನ್ನು ಪ್ರತಿಭಟನೆ ಮೂಲಕ ಎಚ್ಚರಿಸುವ ಕೆಲಸ ಮಾಡದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಈ ನಿಟ್ಟಿನಲ್ಲಿ ಈ ಹೋರಾಟವನ್ನು ಗಂಭೀರವಾಗಿ ತೆಗೆದುಕೊಂಡು ಹೋಗುತ್ತೇವೆ. ತಾಲೂಕಿನ ಎಲ್ಲಾ ಕೆರೆಗಳಲ್ಲಿ ನಿಂತು ಹೋರಾಟ ಮಾಡುತ್ತೇವೆ. ಇದಕ್ಕೂ ಬಗ್ಗದಿದ್ದರೆ ಕೆರೆಯಲ್ಲಿ ಅಹೋರಾತ್ರಿ ಧರಣಿ ಮಾಡಲು ಚಿಂತನೆ ಮಾಡಲಾಗುತ್ತದೆ ಎಂದು ರಮೇಶ್‌ಗೌಡರು ಎಚ್ಚರಿಕೆ ನೀಡಿದರು.
ಹೊಂಗನೂರು ಡೈರಿ ಸಿಇಒ ಪುಟ್ಟರಾಜುಅವರು ಮಾತನಾಡಿ, ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಮಾತನಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಬಳಿ ಎಲ್ಲಾ ಪಕ್ಷಗಳು ಸಹ ಇದನ್ನು ಮರೆತು ರೈತರ ಹಿತವನ್ನು ಕಡಿಗಣಿಸಿ ಸ್ವಾರ್ಥ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಸಾರ್ವಜನಿಕರಿಗೆ, ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳಿಗೆ ಇಚ್ಚಾಸಕ್ತಿ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತಿದೆ ಎಂದರು ವಿಷಾಧಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿ ಈ ಭಾಗದ ಏಳೆಂಟು ಕೆರೆಗಳಿಗೆ ನೀರನ್ನು ಕೊಟ್ಟಿದ್ದರು. ಆದರೆ ಸಿ.ಪಿ.ಯೋಗೇಶ್ವರ್‌ಅವರು ಶಿಂಷಾ-ಕಣ್ವಾ ಕುಡಿನೀರು ಯೋಜನೆ ಮೂಲಕ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಿ ಬರದ ನಡುವೆ ಸಂವೃದ್ಧಿಯಾಗಿ ತಾಲೂಕು ರಾಜ್ಯದ ಗಮನ ಸೆಳೆದಿತ್ತು. ಆದರೆ ಇತ್ತೀಚೆಗೆ ರಾಜಕಾರಣಿಗಳು ತಮ್ಮ ವಯಕ್ತಿಕ ಲಾಭಕ್ಕೆ ಹೆಚ್ಚು ಒತ್ತು ನೀಡಿ ರೈತರ ಹಿತವನ್ನು ಮರೆತಿರುವ ನಿಟ್ಟಿನಲ್ಲಿ ಇಂದು ತಾಲೂಕಿನ ಕೆರೆಗಳಲ್ಲಿ ನೀರಿಲ್ಲದೆ ಹೈನೋದ್ಯಮ ಕುಂಠಿತವಾಗಿದೆ. ರೈತರು ಬೆಳೆಯುವ ಬೆಳೆಗೆ ಸರ್ಕಾರದಿಂದ ವೈಜ್ಷಾನಿಕ ಬೆಲೆ ಇಲ್ಲ, ಜೊತೆಗೆ ಲಾಭದ ನಿರೀಕ್ಷೆ ಮಾಡಿದವರಿಗೆ ಬಂಡವಾಳವೂ ವಾಪಸ್ ಬರುವುದಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನ ರೈತರನ್ನು ಆರ್ಥಿಕವಾಗಿ ಕೈ ಹಿಡಿದಿದ್ದ ಹೂನೋದ್ಯಮ, ತೆಂಗು, ರೇಷ್ಮೆಬೆಳೆ ನೀರಿಲ್ಲದೆ ಸಂಪೂರ್ಣ ಸೊರಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಈ ನಿಟ್ಟಿನಲ್ಲಿ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸಲು ಕ್ರಮ ಕೈಗೊಂಡರೆ ಸರ್ಕಾರ ಕೊಡುವ ಎಲ್ಲಾ ಭಾಗ್ಯಗಳು ರೈತರೆ ಸಂಪಾದನೆ ಮಾಡಿಕೊಳ್ಳುತ್ತಾರೆ ಎಂದು ಪುಟ್ಟರಾಜು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ನಾಡು,ನುಡಿ, ಭಾಷೆಯ ಜೊತೆಗೆ ರೈತರಿಗೆ ಅನ್ಯಾಯವಾದ ವೇಳೆ ಸದಾ ದ್ವನಿ ಎತ್ತುತ್ತಾ ಬಂದಿರುವ ಕಕಜ ವೇದಿಕೆ ರಮೇಶ್‌ಗೌಡರು ಕಾವೇರಿ ನೀರನ್ನು ಉಳಿಸಿಕೊಳ್ಳಬೇಕು ಎಂದು ಕಳೆದ ೩೨೨ ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಜನತೆ ಈ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ. ಆದರೆ ಇಂದು ತಾಲೂಕಿನ ಕೆರೆಗಳನ್ನು ನೋಡಿದರೆ ರೈತರಿಗೆ ಹೋರಾಟದ ಖಾಳಜಿ ಅರ್ಥವಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ನಾವು ಇಂದು ನಮ್ಮಿಂದಲೇ ಆಯ್ಕೆಯಾದ ಸರ್ಕಾರದಿಂದ ಮೂಲಭೂತ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವ ಪರಿಸ್ಥಿತಿಯನ್ನು ರಾಜಕಾರಣಿಗಳು ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜನರು ಸಂಘಟಿತರಾಗದಿದ್ದರೆ ಮತ್ತೆ ನಾವು ಜೀತದಾರರಾಗುತ್ತೇವೆ ಎಂದು ಪುಟ್ಟರಾಜುಅವರು ಎಚ್ಚರಿಕೆ ನೀಡಿದರು.

ನಿವೃತ್ತ ಶಿಕ್ಷಕರಾದ ಮುರಳೀಧರ್‌ಅವರು ಮಾತನಾಡಿ, ಕೆರೆ, ಕಟ್ಟೆ, ಬಾವಿಗಳ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂದು ಕೆರೆ ಕುಂಟೆಗಳನ್ನು ನಾಶ ಮಾಡುತ್ತಾ ಬಂದಿದ್ದು, ಕೆರೆಗಳು ಜೀವ ಕಳೆಯನ್ನು ಕಳೆದುಕೊಂಡು ತ್ಯಾಜ್ಯ ಮಯವಾಗಿವೆ. ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬುವಲ್ಲಿ ಸಿಪಿವೈರು ಹಾಗೂ ಹೆಚ್ಡಿಕೆ ಅವರು ಶ್ರಮಿಸಿದ್ದರು. ತಾಲೂಕಿನ ಕೆರೆಗಳು ವಿದೇಶಿ ಪಕ್ಷಿಗಳು, ಜಲಚರ ಪ್ರಾಣಿಗಳಿಗೆ ಆಧಾರವಾಗಿದ್ದವು. ಅಲ್ಲದೆ ಅಂತರ್ಜಲ ಹೆಚ್ಚಳವಾಗಿ ಹೈನೋದ್ಯಮ, ಮೀನುಗಾರಿಕೆಗೆ ಹೆಚ್ಚಿನ ಆರ್ಥಿಕ ಲಾಭ ಕೊಡುತ್ತಿತ್ತು. ಆದರೆ ಇಂದು ಶಾಸಕರು ಇಲ್ಲದೆ ಕ್ಷೇತ್ರದ ಕೆರೆಗಳಿಗೆ ನೀರು ತುಂಬುವ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಅನಂತಕೃಷ್ಣರಾಜೇ ಅರಸು ಮಾತನಾಡಿ, ಬರದ ನಡುವೆ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸಿ ರಾಜ್ಯದ ಗಮನ ಸೆಳೆದಿದ್ದ ತಾಲೂಕಿನಲಿ ಇಂದು ಕೆಆರ್‌ಎಸ್ ಜಲಾಶಯದಲ್ಲಿ ನೀರು ಭರ್ತಿಯಾಗಿ ತಮಿಳುನಾಡಿಗೆ ನೀರು ಹರಿಸಿ ಅಲ್ಲಿನ ಡ್ಯಾಂಗಳು ತುಂಬಿ ಸಾಕಷ್ಟು ನೀರು ಸಮುದ್ರದ ಪಾಲಾಗಿದೆ. ಆದರೆ ತಾಲೂಕಿನ ಕೆರೆಗಳಿಗೆ ನೀರು ಇಲ್ಲದೆ ಬರಿದಾಗಿವೆ ಎಂದರೆ ಇದಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಇದನ್ನು ಖಂಡಿಸಿ ದ್ವನಿಯಾಗಿರುವ ರಮೇಶ್‌ಗೌಡರ ಹೋರಾಟ ಸ್ವಾಗತಾರ್ಹವಾಗಿದೆ. ವೇದಿಕೆಯ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತೇವೆ ಎಂದರು.
ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಭರದ ನಡುವೆ ಕೆರೆಕಟ್ಟೆಗಳಿಗೆ ನೀರು ತುಂಬಿದ್ದ ಇತಿಹಾಸ ಇದೆ. ಸರ್ಕಾರ ರಾಜ್ಯದಲ್ಲಿ ಹಲವು ತಾಲೂಕುಗಳನ್ನು ಬರ ಎಂದು ಘೋಷಣೆ ಮಾಡಿದ್ದರೂ ಚನ್ನಪಟ್ಟಣವನ್ನು ಬರದ ತಾಲೂಕು ಎಂದು ಘೋಷಣೆ ಮಾಡಿಲ್ಲ. ಕೆಆರ್‌ಎಸ್‌ನಿಂದ ನೀರು ಬರುತ್ತದೆ ಎಂದು ಕ್ಷೇತ್ರ ಸಂವೃದ್ಧವಾಗಿದೆ ಎಂದು ವರದಿ ನೀಡಿದ್ದಾರೆ. ಆದರೆ ತಾಲೂಕಿನ ಕೆರೆಗಳು ನೀರಿಲ್ಲದೆ ಬರಿದಾಗಿದ್ದು ಕೆಆರ್‌ಎಸ್‌ನಲ್ಲಿ ಸಹ ಒಂದು ತಿಂಗಳಲ್ಲಿ ನೀರು ಖಾಲಿಯಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಬಡಿದೆಬ್ಬಿಸಲು ತಾಲೂಕಿನ ಕೆರೆಗಳಿಗೆ ನೀರನ್ನು ತುಂಬುವಂತೆ ಆಗ್ರಹಿಸಿ ಎಲ್ಲಾ ಕೆರೆಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿವಕುಮರ್, ಬಾಬು, ಪಟೇಲ್ ಸ್ವಾಮಿ, ದಿನೇಶ್ ಕುಮಾರ್, ಸಿದ್ದರಾಜು, ಕೃಷ್ಣ, ಶಿವು, ನಾಗೇಶ್ ಬಿ., ಸಿದ್ದರಾಜು, ಮಲ್ಲೇಶ್, ಮೋಹನ್ ರಾಜ್ ಅರಸ್, ಮಂಜು, ಹರೀಶ್ ರಾಜೇ ಅರಸ್, ಸೋಮಶೇಖರ್ ರಾಜೇ ಅರಸ್, ನಂಜೇಗೌಡ, ಹೆಚ್.ಹೆಚ್. ಹಳ್ಳಿ, ಭೈರಶೆಟ್ಟಿಹಲ್ಳಿ ದೇವರಾಜು, ಭಾಸ್ಕರ್ ರಾಜೇ ಅರಸ್, ಪರಶುರಾಮ್ ಅಂಬಾಡಹಲ್ಳಿ, ಪರಮೇಶ್, ಕೃಷ್ಣಮೂರ್ತಿ, ಜಮೀರ್ ಪಾ, ನಿಂಗೇಗೌಡ, ಪಿ. ರಾಜು, ಬೀರೇಶ್, ಚಂದ್ರು, ಸಿದ್ದಪ್ಪ , ರಂಜಿತ್‌ಗೌಡ, ಆರ್. ಶಂಕರ್, ಯೋಗೇಶ್‌ಗೌಡ, ಹನುಮಂತು, ಕೋಟೆ ಚಂದ್ರು, ಸಂತೋಷ್, ವೇಣುಗೋಪಾಲ್, ಮುರಳಿಧರ್, ಸಾಲುಮನ್ ಪಾಷಾ, ವರದರಾಜ್ ಗ್ರಾ.ಪಂ. ಸದಸ್ಯರು, ಹೊಂಗನೂರು ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular