ಮೈಸೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ.ಗಾಯಿತ್ರಿ ಅವರು ಹುಣಸೂರು ತಾಲ್ಲೂಕು ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಅವರೊಂದಿಗೆ ಚರ್ಚಿಸಿದರು.
ನಂತರ ಕೊತ್ತೇಗಾಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾ.ಪಂ ಸದಸ್ಯರೊಂದಿಗೆ ಪ್ರಗತಿ ಮತ್ತು ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಸತಿ ಯೋಜನೆ, ಮ-ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್ ಯೋಜನೆ ಮತ್ತು ತೆರಿಗೆ ಪಾವತಿ ಸೇರಿದಂತೆ ಇತರೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲಿಸಿದರು. ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಖಲೀಂ ಅವರೊಂದಿಗೆ ಜಲಜೀವನ್ ಮಿಷನ್ ಹಾಗೂ ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲಿಸಿದರು.
ಇದೇ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಭೆ ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಗ್ರಂಥಾಲಯಕ್ಕೆ ಮಕ್ಕಳ, ಮಹಿಳೆಯರ, ನಾಗರೀಕರ ನೊಂದಣಿ ಮಾಡಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗ್ರಂಥಪಾಲಕರಿಗೆ ಸೂಚಿಸಲಾಯಿತು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಮನು, ತಾಲ್ಲೂಕು ಯೋಜನಾಧಿಕಾರಿ ರಾಜೇಶ್, ಕೊತ್ತೇಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ಕಾರ್ಯದರ್ಶಿ ಆನಂದ್, ಸದಸ್ಯರಾದ ಸುಭಾಷಿಣಿ, ಜಯರಾಮೇಗೌಡ, ಮಹದೇವಪ್ಪ, ಶಶಿಕುಮಾರ್ ಸೇರಿ ಪಂಚಾಯಿತಿ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.