Saturday, April 19, 2025
Google search engine

Homeರಾಜ್ಯಬೆಂಗಳೂರು ಜಲಮಂಡಳಿಯಲ್ಲಿ ರಾತ್ರೋರಾತ್ರಿ 200ಕ್ಕೂ ಹೆಚ್ಚು ಮಂದಿಯ ವರ್ಗಾವಣೆ

ಬೆಂಗಳೂರು ಜಲಮಂಡಳಿಯಲ್ಲಿ ರಾತ್ರೋರಾತ್ರಿ 200ಕ್ಕೂ ಹೆಚ್ಚು ಮಂದಿಯ ವರ್ಗಾವಣೆ

ಬೆಂಗಳೂರು: ಬೆಂಗಳೂರು ಜಲಮಂಡಳಿಯಲ್ಲಿ ಒಂದೇ ದಿನ 200 ಕ್ಕೂ ಹೆಚ್ಚು ಮಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಹಲವರಿಗೆ ಮುಂಬಡ್ತಿ ನೀಡಲಾಗಿದೆ. ಕೆಲವರಿಗೆ ಡಬಲ್ ಪೋಸ್ಟಿಂಗ್ ಕೊಟ್ಟು ಯಡವಟ್ಟು ಮಾಡಲಾಗಿದೆ.

ಬೆಂಗಳೂರು ಉಸ್ತುವಾರಿ ಸಚಿವರ ಗಮನಕ್ಕೂ ತರದೇ ಈ ವರ್ಗಾವಣೆ ನಡೆದಿದೆ.

ಒಂದೇ ದಿನ 200ಕ್ಕೂ ಹೆಚ್ಚು ನೌಕರರ ಟ್ರಾನ್ಸ್​​​ಫರ್, ಪೋಸ್ಟಿಂಗ್ ಮಾಡಲಾಗಿದೆ. ನೂರಕ್ಕೂ ಹೆಚ್ಚು ನೌಕರರಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ. ಹಲವು ನೌಕರರಿಗೆ ಮಾಪನ ಹುದ್ದೆಯಿಂದ ಜಲಪರೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಜಲಮಂಡಳಿ ಇತಿಹಾಸದಲ್ಲೇ ಈ ರೀತಿ ರಾತ್ರೋರಾತ್ರಿ ವರ್ಗಾವಣೆ ಮಾಡಿರುವುದು ಮೊದಲು ಎನ್ನಲಾಗುತ್ತಿದೆ.

ವಾಟರ್ ಇನ್ಸ್ ​ಪೆಕ್ಟರ್, ಕ್ಲರ್ಕ್, ಹೆಲ್ಪರ್​ ಗಳಿಗೆ ವರ್ಗಾವಣೆ ಭಾಗ್ಯ ದೊರೆತಿದೆ. ಪೋಸ್ಟಿಂಗ್, ಟ್ರಾನ್ಸ್​ಫರ್​ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಆಡಳಿತಾಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷರಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಂಬಡ್ತಿಯಿಂದ ಜಲಮಂಡಳಿಗೆ ಹೆಚ್ಚು ಸಂಬಳ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಲದ ಸುಳಿಯಲ್ಲಿರುವ ಜಲಮಂಡಳಿಗೆ ಮುಂಬಡ್ತಿಯ ಹೊರೆ ಉಂಟಾಗಲಿದೆ. ಒಬ್ಬೊಬ್ಬರಿಗೆ ಎರಡೆರಡು ಪೋಸ್ಟಿಂಗ್ ನೀಡಿ ಯಡವಟ್ಟು ಮಾಡಿರುವುದು ಇನ್ನಷ್ಟು ಹೊರೆಯಾಗಲಿದೆ.

ಮಂಡಳಿ ನಷ್ಟದಲ್ಲಿದ್ದು, ಸಂಬಳ ಕೊಡುವುದಕ್ಕೂ ಆಗದ ಪರಿಸ್ಥಿತಿ ಇದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದರು. ಅಲ್ಲದೆ, ನೀರಿನ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಕಳೆದ 8-9 ವರ್ಷದಿಂದ ದರ ಏರಿಕೆ ಮಾಡಿಲ್ಲ. ಹೀಗಾಗಿ ಈ ಬಾರಿ ಮಾಡಿಯೇ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರುವಾಗ ಸಚಿವರ ಗಮನಕ್ಕೂ ತಾರದೇ ರಾತ್ರೋರಾತ್ರಿ ವರ್ಗಾವಣೆ, ಮುಂಬಡ್ತಿ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಒಬ್ಬೊಬ್ಬರಿಗೆ ಎರಡೆರಡು ಪೋಸ್ಟಿಂಗ್ ನೀಡಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular