ಮೈಸೂರು: ದಟ್ಟ ಮೋಡ, ತುಂತುರು ಮಳೆ, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮುಂಜಾನೆಯಿಂದ ಬೆಟ್ಟಕ್ಕೆ ಬಂದ ಸಾವಿರಾರು ಭಕ್ತರು ೩ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.
ಗುರುವಾರ ದಿನಿವಿಡೀ ಸುರಿದ ಮಳೆ ಶುಕ್ರವಾರ ಕೊಂಚ ಬಿಡುವು ನೀಡಿತ್ತು. ಬೆಳಗ್ಗೆ ೮ ಗಂಟೆಯಾದರೂ ಮಳೆಯಂತೆ ಸುರಿಯುತ್ತಿದ್ದ ಮಂಜನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ಬೆಟ್ಟದತ್ತ ಧಾವಿಸಿ ಬಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದು ಧನ್ಯರಾದರು. ಜಿಲ್ಲೆ, ರಾಜ್ಯ, ಹೊರರಾಜ್ಯದ ಭಕ್ತರು ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು, ಮೆಟ್ಟಿಲುಗಳ ಮೂಲಕ ಬಂದರೆ ಇನ್ನು ಕೆಲವರು ಸಾರಿಗೆ ಬಸ್‌ನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಉಚಿತ ಪ್ರವೇಶ, ೫೦ ರೂ, ೧೦೦ ರೂ, ೩೦೦ರೂಗಳ ಸರತಿ ಸಾಲಿನಲ್ಲಿ ನಿಂತು ಸಾವದಾನವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಸರತಿ ಸಾಲಿನುದ್ದಕ್ಕೂ ಚಾಮುಂಡೇಶ್ವರಿಯ ಜಯಘೋಷಗಳು ಮೊಳಗಿದವು.
ಚಾಮುಂಡಿಬೆಟ್ಟಕ್ಕೆ ಉಚಿತ ಬಸ್‌ಗಳಲ್ಲಿ ಮಾತ್ರವಲ್ಲ, ಮೆಟ್ಟಿಲು ಮಾರ್ಗವಾಗಿ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು.
ಯುವತಿಯರು, ಗೃಹಿಣಿಯರು ೧೦೦೧ ಮೆಟ್ಟಿಲುಗಳಿಗೂ ಕುಂಕುಮ, ಅರಿಶಿಣ ಹಚ್ಚುತ್ತ ಮೆಟ್ಟಿಲು ಹತ್ತಿದರು. ಕೆಲವರು ಮಂಡಿಯಲ್ಲೇ ಮೆಟ್ಟಿಲುಗಳನ್ನು ಹತ್ತುವ ದೃಶ್ಯ ಭಕ್ತಭಾವದ ರೂಪಕದಂತಿತ್ತು.
ವಿಶೇಷ ಪೂಜೆ: ಮುಂಜಾನೆ ಮೂರು ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ ೫.೩೦ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ ೯.೩೦ಕ್ಕೆ ಮಹಾಮಂಗಳಾರತಿ, ಸಂಜೆ ೬.೩೦ರಿಂದ ೭ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ ೯ ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಮಹಾಲಕ್ಷ್ಮೀ ಅಲಂಕಾರ: ಎಂದಿನಂತೆ ಮೂರನೇ ಆಷಾಢ ಶುಕ್ರವಾರವೂ ದೇವಾಲಯದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿ ವಿಶೇಷ ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ನೀಲಿ ಬಾಡರಿನ ಹಸಿರು ಸೀರೆಯುಟ್ಟ ಚಾಮುಂಡಿಯನ್ನು ನೋಡಲು ಭಕ್ತರು ಮುಗಿಬಿದ್ದರು. ದೇವಾಲಯದ ಇಡೀ ಆವರಣ ವಿಶೇಷ ಹೂಗಳಿಂದ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ನಾನಾ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು. ಹೂವಿನಿಂದ ಚಾಮುಂಡೇಶ್ವರಿ ಅಮ್ಮ ಎಂದು ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕಳೆದ ಎರಡು ವಾರಗಳಿಗೆ ಹೋಲಿಸಿದರೆ ೩ನೇ ವಾರದ ಹೂವಿನ ಅಲಂಕಾರ ಅತ್ಯಂತ ಸುಂದರವಾಗಿತ್ತು.
ಪ್ರಸಾದ ವಿತರಣೆ: ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ದೇವುಬಾಯಿ ರಾಜಾ ವೈದ್ಯಪಂಡಿತ್ ಪಿ.ಹೆಚ್.ಚಂದ್ರಬಾನ್ ಸಿಂಗ್ ಮೆಮೋರಿಯಲ್ ಹರ್ಬಲ್ ಗಾರ್ಡನ್ ಮತ್ತು ಹೋಲಿಸ್ಟಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿಬಾತ್, ಬಾತ್, ಅಲಸಂದೆ ಹುಳಿ, ಅನ್ನ ಸಾಂಬಾರ್, ಮೊಸರು ವಿತರಿಸಲಾಯಿತು. ಬೆಳಗ್ಗೆ ೮ರಿಂದ ರಾತ್ರಿ ೭ ಗಂಟೆಯವರೆಗೂ ಪ್ರಸಾದ ನೀಡಲಾಯಿತು.
ಗಣ್ಯರಿಂದ ದರ್ಶನ: ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಹಲವು ಗಣ್ಯರು ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕುಟುಂಬ, ನಟ ಚಿಕ್ಕಣ್ಣ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸೇರಿದಂತೆ ಹಲವರು ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ನಗರದ ಹಲವೆಡೆ ಪ್ರಸಾದ ವಿತರಣೆ: ೩ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಹಲವೆಡೆ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ಅಗ್ರಹಾರ, ಚಾಮುಂಡಿಪುರಂ, ಕುವೆಂಪುನಗರ, ಒಂಟಿಕೊಪ್ಪಲು, ಆರ್‌ಟಿಒ ವೃತ್ತ ಸೇರಿದಂತೆ ಹಲವೆಡೆ ಪ್ರಸಾದ ವಿತರಿಸಲಾಯಿತು.
ಹೆಚ್ಚಾದ ವಿಐಪಿಗಳು: ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಮೂರನೇ ವಾರ ವಿಐಪಿಗಳ ಸಂಖ್ಯೆ ಹೆಚ್ಚಾಗಿತ್ತು. ಸಾವಿರಾರು ಮಂದಿ ಸಚಿವರು, ಶಾಸಕರು, ಸಂಸದರ ಶಿಫಾರಸ್ಸು ಪತ್ರ ಹಿಡಿದು ಬಂದು ದೇವಸ್ಥಾನಕ್ಕೆ ಬಿಡುವಂತೆ ಮುಗಿಬಿದ್ದರು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ವಿಪಿಐಗಳನ್ನು ನೇರವಾಗಿ ಬಿಡುತ್ತಿದ್ದಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಟ್ಟಾಗಿ ಪೊಲೀಸರ ಮೇಲೆಯೇ ಹರಿಹಾಯ್ದರು. ವಿಐಪಿಗಳು ಹೆಚ್ಚಾದ್ದರಿಂದ ಪ್ರವೇಶ ದ್ವಾರದ ಬಳಿಯ ಗೇಟಿಗೆ ಬೀಗಹಾಕಿದ ಪೊಲೀಸರು ಒಳಗೆ ಹೋದವರು ದರ್ಶನ ಪಡೆದು ಹೊರಬಂದ ನಂತರ ಹೊರಗಿರುವವರನ್ನು ಬಿಡುತ್ತಿದ್ದರು.
೧೫ ಸಾವಿರ ಹೋಳಿಗೆ ವಿತರಣೆ: ಚಾಮುಂಡಿಬೆಟ್ಟಕ್ಕೆ ಮೆಟ್ಟಿಲು ಮಾರ್ಗವಾಗಿ ಬರುವ ಭಕ್ತರಿಗೆ ಚಾಮುಂಡಿಬೆಟ್ಟದ ಪಾದದ ಬಳಿ ರೈಸ್ ಬಾತ್, ವೆಜ್ ಪಲಾವ್, ಬಿಸಿ ಬೇಳೆ ಬಾತ್, ಮೊಸರನ್ನ, ಲಡ್ಡು, ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಪೈಕಿ ಹೋಳಿಗೆ ವಿತರಣೆ ಗಮನ ಸೆಳೆಯಿತು. ಮಾಜಿ ಶಾಸಕ ಸಾ.ರಾ.ಮಹೇಶ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಅಧ್ಯಕ್ಷ ವಿವೇಕಾನಂದ ಅವರ ನೇತೃತ್ವದಲ್ಲಿ ಸ್ನೇಹಿತರು ಹಾಗೂ ಚಾಮುಂಡೇಶ್ವರಿಯ ಭಕ್ತರು ಹೋಳಿಗೆ ವಿತರಣೆ ಆಯೋಜಿಸಿದ್ದರು. ಸುಮಾರು ೧೫ ಸಾವಿರ ಗರಿ ಗರಿ ಕಾಯಿ ಹೋಳಿಗೆಗಳನ್ನು ವಾಹನದಲ್ಲಿ ತುಂಬಿಕೊಂಡು ಭಕ್ತರಿಗೆ ಹಂಚಲಾಯಿತು. ಈ ಬಗ್ಗೆ ಮಾತನಾಡಿದ ಆಯೋಜಕ ಕುಮಾರ್, ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಮೂರನೇ ಶುಕ್ರವಾರ ಹೋಳಿಗೆ ವಿತರಣೆ ಮಾಡುತ್ತಿದ್ದೇವೆ. ಅಮ್ಮನವರ ಭಕ್ತರಿಗೆ ಸಿಹಿ ನೀಡುವ ಸೌಭಾಗ್ಯ ನಮ್ಮದಾಗಿರುವುದು ಖುಷಿಯ ವಿಚಾರ. ತಾಯಿ ಶಕ್ತಿ ಕೊಟ್ಟರೆ ಇನ್ನಷ್ಟು ಸೇವೆ ಮಾಡುತ್ತೇವೆ ಎಂದರು.
