Monday, April 21, 2025
Google search engine

Homeರಾಜ್ಯಸುದ್ದಿಜಾಲವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ರಾಮನಗರ: ಡಾ. ಅಂಬೇಡ್ಕರ್ ನಿವಾಸ್ ಯೋಜನೆ, ಬಸವ ವಸತಿ ಹೆಚ್ಚುವರಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಆದ್ಯತೆ ಮೇರೆಗೆವಸತಿಗಳನ್ನು ಒದಗಿಸಿಕೊಡುವಂತೆ ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರುಆ. ೨೩ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸತಿ ಅತ್ಯಂತ ಮಹತ್ವದ ಯೋಜನೆ. ವಾಸಿಸುವ ಮನೆಗಾಗಿ ಸಾಕಷ್ಟು ಜನ ಕಾಯುತ್ತಿರುತ್ತಾರೆ, ವಿವಿಧ ಯೋಜನೆಯಡಿ ನಿಗಧಿಪಡಿಸಲಾದ ಗುರಿಯನ್ವಯ ಅರ್ಹರಿಗೆ ಆದ್ಯತೆ ಮೇರೆಗೆ ಮನೆಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗಳು ಶ್ರಮಿಸುವಂತೆ ತಿಳಿಸಿದ ಅವರು ಕೆಲವು ಪಂಚಾಯತ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಮನೆಗಳು ಮಂಜೂರಾಗಿದ್ದಲ್ಲಿ ವಸತಿ ಇಲಾಖೆಯೊಂದಿಗೆ ಚರ್ಚಿಸಿ ಎಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆಯೋ ಆ ಪ್ರದೇಶಗಳಿಗೆ ಮನೆಗಳನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಮಾತನಾಡಿ, ಕಳೆದ ವರ್ಷ ೮,೧೦೦ ಮನೆಗಳ ಗುರಿನೀಡಲಾಗಿತ್ತು. ಅವುಗಳಲ್ಲಿ ೭,೧೦೦ ಮನೆಗಳು ಆನ್‌ಲೈನ್ ಮೂಲಕ ಆಯ್ಕೆಯಾಗಿದ್ದವು, ಆ ಪೈಕಿ ೩,೮೦೦ ಪ್ರಗತಿಯಲ್ಲಿದ್ದು, ಉಳಿದವು ಕೂಡಲೇ ನಿರ್ಮಾಣಗೊಳ್ಳಲಿದೆ ಎಂದರು. ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಅವರು ಮಾತನಾಡಿ, ಚನ್ನಪಟ್ಟಣ ತಾಲ್ಲೂಕಿಗೆ ಇದೀಗ ೪,೦೦೦ ನಿವೇಶನಗಳನ್ನು ಸ್ಥಳ ಗುರುತಿಸಲಾಗಿದೆ, ಅದೇರೀತಿ ರಾಮನಗರ, ಕನಕಪುರ, ಮಾಗಡಿ ತಾಲ್ಲೂಕುಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಮನಗರ ತಾಲ್ಲೂಕಿಗೆ ವಸತಿಯೋಜನೆಯಡಿ ೪೦ ಕೋಟಿ ರೂ.ಗಳನ್ನು ವಸತಿ ಸಚಿವರು ಮಂಜೂರು ಮಾಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಲು ಸ್ಥಳೀಯ ತಹಶೀಲ್ದಾರ್ ಕ್ರಮ ವಹಿಸಬೇಕು. ಅದಕ್ಕೆಂದೇ ಗುರುತಿಸಲಾದ ಜಮೀನನ್ನು ಮೊದಲು ವಶಕ್ಕೆ ಪಡೆಯುವಂತೆ ಜಿಲ್ಲಾಉಸ್ತುವಾರಿ ಸಚಿವರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮನಗರ ತಹಶೀಲ್ದಾರ್ ತೇಜಸ್ವಿನಿ ಬೋರರಸಹನ ಹಳ್ಳಿಕೆರೆ, ಅಮಾನಿಕೆರೆ, ಕೊತ್ತೀಪುರದಲ್ಲಿ ಜಮೀನನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಚನ್ನಪಟ್ಟಣದಲ್ಲಿ ನಿವೇಶನಕ್ಕಾಗಿ ೧೫ ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ೫ ಕಿಲೋ ಮೀಟರ್ ವ್ಯಾಪ್ತಿಯೊಳಗೆ ೧೭೫ ಎಕರೆ ಜಮೀನು ಗುರುತಿಸಲಾಗಿದ್ದು, ಈಗಾಗಲೇ ೭೫ ಎಕರೆಯನ್ನು ಮೀಸಲಿರಿಸಿ ಆದೇಶ ಹೊರಡಿಸಲಾಗಿದೆ. ಪಟ್ಲುವಿನಲ್ಲಿ ೩೦ ಎಕರೆ ಪ್ರದೇಶದಲ್ಲಿ ನಿರ್ಮಿತಿ ಕೇಂದ್ರದವರು ಜಾಗವನ್ನು ಸಮತಟ್ಟುಮಾಡುತ್ತಿದ್ದಾರೆ ಎಂದರು.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅತ್ಯುತ್ತಮತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ತ್ಯಾಜ್ಯ ಘಟಕಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡುವಂತೆಕರೆ ನೀಡಿದರು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ, ಕುಡಿಯವ ನೀರು ಸರಬರಾಜಾಗುವಂತೆ ಕ್ರಮವಹಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಕುಮಾರ್‌ಗೆ ತಿಳಿಸಿದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ೩,೨೩,೦೧೩ ಫಲಾನುಭವಿಗಳು ಜಿಲ್ಲೆಯಲ್ಲಿಲಾಭ ಪಡೆಯುತ್ತಿದ್ದು, ತಿಂಗಳು ೧೨.೭ ಕೋಟಿ ಸರಾಸರಿ ವಿದ್ಯುತ್ ಬಿಲ್ ಅನ್ನು ಭರಿಸಲಾಗುತ್ತಿದ್ದು, ಇದೂವರೆಗೆ ೧೨೨.೨೦ ಕೋಟಿ ರೂ.ಗಳನ್ನು ಭರಿಸಲಾಗಿದೆ ಎಂದು ಶಿವಕುಮಾರ್ ಸಭೆಗೆ ಮಾಹಿತಿ ನೀಡಿದರು.

ಮಹತ್ವದ ಯೋಜನೆಯಾದ ಜಲ ಜೀವನ್ ಮಿಷನ್‌ಗೆ ಸಂಬಂಧಿಸಿದಂತೆ, ಜಿಲ್ಲೆಯ ಯಾವ ಯಾವ ಭಾಗದಲ್ಲಿ ಎಷ್ಟೇಷ್ಟು ಕಾಮಗಾರಿ ಪೂರ್ಣಗೊಂಡಿದೆ, ಅದರ ಸಾಧಕ ಭಾಧಕಗಳೇನು, ಈ ಉದ್ದೇಶ ಈಡೇರಿದೆಯೆ ಈ ಯೋಜನೆಯಿಂದಾಗಿ ಎಷ್ಟು ಮನೆಗಳಿಗೆ ಕುಡಿಯುವ ನೀರು ಲಭಿಸುತ್ತಿದೆ ಎಂಬ ವಿವರವಾದ ಮಾಹಿತಿಯನ್ನು ಮುಂದಿನ ಕೆಡಿಪಿ ಸಭೆಯಲ್ಲಿ ಮಂಡಿಸುವಂತೆಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರಾದ ಗುರುಮೂರ್ತಿ ಹಾಗೂ ಶ್ರೀಮತಿ ಸುಕನ್ಯಾ ಸಭೆಯಲ್ಲಿದ್ದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular