ರಾಮನಗರ: ಕೆರೆ, ಕಟ್ಟೆಗಳಿಗೆ ಚರಂಡಿಯ ನೀರು ನೇರವಾಗಿ ಸೇರುವುದನ್ನು ತಪ್ಪಿಸಲು ಎಲ್. ಡಬ್ಯೂ. ಎಂ ಯೋಜನೆಯಡಿ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಂಡು ಇನ್ ಲೈನ್ ಟ್ರೀಟ್ ಮೆಂಟ್ ಮಾಡಿ ಶುದ್ದನೀರು ಕೆರೆಗೆ ಸೇರುವಂತೆ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯಿತ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿಯ ಜೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಫ್ ಟಿಓ ಮಾಡಿರುವ ಕಾಮಗಾರಿಗಳಾದ ಜೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಸಿದ್ದಪುರ ಗ್ರಾಮದ ದನದ ಕೊಟ್ಟಿಗೆ, ಸಿದ್ದಪುರ ಗ್ರಾಮದ ಕೊನ್ನಾರಿ ಕಟ್ಟೆ ಅಭಿವೃದ್ದಿ ಕಾಮಗಾರಿ, ಗುಲ್ವಾಪುರ ಗ್ರಾಮದ ಸರ್ಕಾರಿ ಹಳ್ಳ ಅಭಿವೃದ್ದಿ, ಯಲಿಯೂರು ಗ್ರಾಮದ ಸರ್ಕಾರಿ ಹಳ್ಳ ಅಭಿವೃದ್ದಿ ಕಾಮಗಾರಿ, ಕೋಡಂಬಳ್ಳಿ ಗ್ರಾಮದ ದಾಳಿಕಟ್ಟೆ ಅಮೃತ ಸರೋವರ, ಚರಂಡಿ, ಶ್ಯಾನಬೋಗನಹಳ್ಳಿ ಗ್ರಾಮದ ಚರಂಡಿ, ಮೇಕೆಶೆಡ್ಡು ಹಾಗೂ ದನದ ಕೊಟ್ಟಿಗೆಯನ್ನು ವೀಕ್ಷಿಸಿ, ಕಾಮಗಾರಿಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದರು.
ನಂತರ ಮಾತನಾಡಿ ನರೇಗಾ ಕಾಮಗಾರಿಗಳಿಗೆ ಸಂಬಂದಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ತಿಳಿಸಿ ಪರಿಹರಿಸುವುದಾಗಿ ಹೇಳಿದರು ಹಾಗೂ ಕೋಡಂಬಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ದಾಳಿಕಟ್ಟೆ ಅಮೃತ ಸರೋವರವನ್ನು ವೀಕ್ಷಿಸಿ ತಾಲ್ಲೂಕುಗಳಿಗೆ ಮಾದರಿಯಾಗುವ ರೀತಿಯಲ್ಲಿ ಕೆರೆ ನಿರ್ಮಾಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೆ ರೀತಿ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಇತರ ಕೆರೆ ಕಟ್ಟೆಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿಕೊಂಡು ನರೇಗಾ ಯೋಜನೆಯಡಿ ಅಭಿವೃದ್ದಿ ಪಡಿಸುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿದ್ದರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಭಾಗ್ಯಲಕ್ಷ್ಮಿ, ಕುಮಾರ್, ತಾಂತ್ರಿಕ ಸಂಯೋಜಕರಾದ ಸಚಿನ್ ಮತ್ತು ಸಹಾಯಕ ಅಭಿಯಂತರರು ಮೇಘನ, ಗ್ರಾಮ ಪಂಚಾಯಿತಿ ಸದಸ್ಯರು, ಬಿ.ಎಫ್.ಟಿ, ಹಾಗೂ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿದ್ದರು.