ಚಾಮರಾಜನಗರ: ಮೈಸೂರು ಪ್ರಾಂತ್ಯದ ಕೋಟ್ಯಾಂತರ ಜನರಿಗೆ ಶಿಕ್ಷಣ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ನೀಡಿದ ಸುತ್ತೂರು ಸಂಸ್ಥಾನದ ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕೊಡುಗೆ ಅಪಾರ ಹಾಗೂ ಮರೆಯಲಾಗದ ಸೇವೆ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ನಗರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕರ್ನಾಟಕ ದಲ್ಲಿ ಜೆಎಸ್ಎಸ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ, ಉದ್ಯೋಗ, ನಿರ್ವಹಣೆ ಹಾಗೂ ಸುಭದ್ರವಾದ ಜೀವನ ನಡೆಸಲು ಜೆಎಸ್ಎಸ್ ಶಿಕ್ಷಣ ಸಂಸ್ಥೆ ಕಾರಣವಾಗಿದೆ.
ಸುತ್ತೂರು ಸಂಸ್ಥಾನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು, ದಾಸೋಹದ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ರಾಷ್ಟ್ರಗಳಲ್ಲಿ ನಿರ್ಮಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುಭದ್ರವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಉದ್ಯೋಗ ಸೃಷ್ಟಿಸಿ ಸಮಾಜದಲ್ಲಿ ಗೌರವವಾಗಿ ಬಾಳಲು ಮಹತ್ವವಾದ ಶಿಕ್ಷಣ,ಮಾರ್ಗದರ್ಶನ ಹಾಗೂ ಶಕ್ತಿಯನ್ನು ನೀಡಿದ ಮಹಾಸಂಸ್ಥೆ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ತಮ್ಮ ಸೇವೆ ಮತ್ತು ತ್ಯಾಗದ ಮೂಲಕ ಸದೃಢವಾದ ಸಂಸ್ಥೆಯನ್ನು ಬೆಳೆಸಿ ಇಂದಿಗೂ ಕೂಡ ಜನರ ಹೃದಯದಲ್ಲಿ ಭಗವಂತನ ರೂಪದ ಸ್ಥಾನವನ್ನು ಪಡೆದಿದ್ದಾರೆ.
ಸುತ್ತೂರು ಸಂಸ್ಥೆ ಜನರಿಗೆ ಪ್ರೀತಿ ವಿಶ್ವಾಸ ಮನಃಶಾಂತಿಯನ್ನು ನೀಡಿರುವ ಸಂಸ್ಥೆಯಾಗಿದೆ ಎಂದರು. ಸಂಘ ಸಂಸ್ಥೆಗಳು ಸಮಾಜ ಅವರ ಸೇವೆಯನ್ನು ಸದಾ ಕಾಲ ಸ್ಮರಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುವುದು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮಾರ್, ಮಹದೇವೇಗೌಡ , ಮಹಾದೇವ ಶೆಟ್ಟಿ, ಶ್ರಾವ್ಯ, ರವಿ, ಶೇಖರ್, ಮಂಜುನಾಥ್, ಇದ್ದರು.