ಮೈಸೂರು: ಕಲಾ ಪ್ರಕಾರಗಳಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಇದೆ. ಆದರೆ, ಇತ್ತೀಚೆಗೆ ಇವುಗಳು ತಮ್ಮ ಸೊಬಗು ಕಳೆದುಕೊಳ್ಳುತ್ತಿವೆ ಎಂದು ಸಾಹಿತಿ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಬೇಸರ ವ್ಯಕ್ತಪಡಿಸಿದರು.
ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಲೆ, ಸಂಗೀತ ಸಾಹಿತ್ಯ ಎಲ್ಲವೂ ಅವಶ್ಯಕ. ಆದರೆ ಇವುಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಅಷ್ಟು ಅರಿವಿಲ್ಲದ ಕಾರಣ ಅವುಗಳ ಸೊಬಗು ಮರೆಯಾಗುತ್ತಿದೆ ಎಂದು ಹೇಳಿದರು.
ನಾಳೆಯ ಬದುಕಿಗಾಗಿ ಮನುಷ್ಯ ಇಂದಿನ ಕ್ಷಣ ಕಳೆದುಕೊಳ್ಳುತ್ತಿದ್ದಾನೆ. ನಾಳೆ ಎಂಬುದು ಅನಿಶ್ಚಿತ. ಸತ್ತ ನಿನ್ನೆ ಮತ್ತು ಹುಟ್ಟುವ ನಾಳೆಗೆ ಯೋಚನೆ ಮಾಡುತ್ತಾ ಇಂದಿನ ಸೊಬಗನ್ನು ಕಳೆದುಕೊಳ್ಳುತ್ತಾನೆ. ಆದರೆ, ನಾಳೆಯ ಬದುಕಿಗಾಗಿ ಮನುಷ್ಯ ಇಂದಿನ ಕ್ಷಣ ಕಳೆದುಕೊಳ್ಳುತ್ತಿದ್ದಾನೆ. ನಾಳೆಗಳು ತರಬಹುದಾದ ಕಾಮನ ಬಿಲ್ಲುಗಳನ್ನು ನಿರೀಕ್ಷಿಸುತ್ತಾ, ಇಂದು ನಮ್ಮ ಕೆಲಸ ಮರೆಯುತ್ತಿದ್ದೇವೆ. ನಾಳೆ ಎಂಬುದು ಅನಿಶ್ಚಿತ. ಸತ್ತ ನಿನ್ನೆ ಮತ್ತು ಬದುಕಿದ ನಾಳೆಗೆ ಯೋಚನೆ ಮಾಡುತ್ತಾ ಇವತ್ತಿನ ಬದುಕು ಮರೆಯುತ್ತಿದೇವೆ. ಅದಕ್ಕಾಗಿ ಮನುಷ್ಯ ಹಲವಾರು ಅನೈತಿಕ ಮಾರ್ಗ ಹಿಡಿಯುತ್ತಿದ್ದಾನೆ. ಇದರಿಂದಾಗಿಯೇ ಸಮಾಜದಲ್ಲಿ ಕೊಲೆ, ಸುಲಿಗೆಗಳು ಹೆಚ್ಚು ನಡೆಯುತ್ತಿವೆ ಎಂದು ಹೇಳಿದರು.ತರ್ಕದಲ್ಲಿ ಕಾಲಕಳೆಯುವುದಕ್ಕಿಂತ ಅನುಭವ ಮಾತುಗಳು ಮುಖ್ಯ. ಇಂದು ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿವೆ. ಡಿವಿಜಿ ಅವರ ಮಾತಿನಂತೆ ಮನಸ್ಸಿಗೆ ಪೆಟ್ಟು ನೀಡದೇ ಅದನ್ನು ಪ್ರೀತಿಯಿಂದ ನೋಡಬೇಕು. ಮನಸ್ಸು ಗೆದ್ದವರು ಮಾತ್ರ ಜಗತ್ತು ಗೆಲ್ಲಲು ಸಾಧ. ನಾಳೆಯ ಬಗ್ಗೆ ಆತಂಕ ಪಡದೆ ಇಂದಿನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಇಂದು ಸಾಕಷ್ಟು ಪವಾಡ ಸದೃಶ್ಯಗಳಿಂದ ಜಗತ್ತು ಬದಲಾಗುತ್ತಿದೆ. ಎಲ್ಲರ ಬದುಕು ಮತ್ತು ವೃತ್ತಿಗೂ ಅದರದ್ದೇ ಅಪಾಯಗಳು ಇರುತ್ತವೆ. ಸೋಲು, ಗೆಲುವು ಕ್ಷಣಿಕ. ಆದರೆ, ಭಾಗವಹಿಸುವುದು ಬಹಳ ಮುಖ್ಯ. ಸೋಲು ಗೆಲುವುಗಳನ್ನು ಸಂತೋಷದಿಂದ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ತಾವು ಬರೆದ ಪ್ರೀತಿಯ ಹಕ್ಕಿ ಶಿರ್ಷಿಕೆಯಡಿ ಕವನ ವಾಚನ ಮಾಡಿದರು. ಅಲ್ಲದೇ ಕಾಲೇಜು ವತಿಯಿಂದ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಗೋಷ್ಠಿಯಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಯುವ ಕವಿಗಳು ಕಾವ್ಯ ವಾಚನ ಮಾಡಿದರು.
ಸಮಾರಂಭದಲ್ಲಿ ಪ್ರಕಟಣೆ ವಿಭಾಗದ ನಿದೇರ್ಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಸಾಹಿತಿ ಡಾ.ಜಯಪ್ಪ ಹೊನ್ನಾಳಿ, ಕವಯತ್ರಿಯ ಡಾ.ಕೆ.ಎಸ್.ಲಾವಣ್ಯ ಪ್ರಭಾ, ಕರೋಡಿ ಎಂ.ಲೋಲಾಕ್ಷಿ, ಕಾಲೇಜು ಪ್ರಾಂಶುಪಾಲೆ ಡಾ.ಎಂ ಪೂರ್ಣಿಮ, ಶಿಕ್ಷಣಿಕ ಡೀನ್ ಡಾ.ರೇಚಣ್ಣ ಹಾಗೂ ಇತರರು ಇದ್ದರು.