ಮೈಸೂರು: ಮುಡಾ ಹಗರಣದ ಮೂಲಕ ಸರ್ಕಾರ ಬೀಳಿಸಲು ವಿಪಕ್ಷಗಳು ಯತ್ನಿಸುತ್ತಿವೆ. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರ ತಲೆದಂಡ ಶುದ್ಧ ಸುಳ್ಳು. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆಯಾಗಲ್ಲ. ದೆಹಲಿಗೆ ಹೋದವರೆಲ್ಲಾ ಲಾಭಿ ಮಾಡುತ್ತಾರೆ ಎಂಬುದೆಲ್ಲಾ ಸುಳ್ಳು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಗಲ್ಲ. ಈ ರೀತಿಯ ಚರ್ಚೆ ಮಾಡಿರುವುದು ವಿರೋಧ ಪಕ್ಷಗಳು. ಆದರೆ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ರಾಷ್ಟ್ರೀಯ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಅವರ ಪರ ನಿಂತಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ.
ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ಅನುಮತಿ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಸರ್ಕಾರ ಅಲುಗಾಡಿಸಲು ಷಡ್ಯಂತ್ರ ರೂಪಿಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಿವೆ. ಆದರೆ ವಿರೋಧ ಪಕ್ಷದವರು ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ ಎಂದು ಸುಳ್ಳುಸುದ್ದಿ ಹರಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರೇ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಯಾರೂ ಸಂಶಯಪಡುವ ಅಗತ್ಯವಿಲ್ಲ ಎಂದರು.
ರಾಜ್ಯಪಾಲರು ಫೆ.೧೨ರಂದು ಗ್ಯಾರಂಟಿಗಳು ೧.೨ ಕೋಟಿ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿವೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ೪.೬ ಕೋಟಿ ಜನರಿಗೆ ನೇರವಾಗಿ ಅನುಕೂಲ ಆಗಿದೆ. ಬಡವರ ಬದುಕಿಗೆ ಬೆಳಕಾಗುವ ಕಾರ್ಯಕ್ರಮಗಳಾಗಿವೆ. ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ, ತಾಲೂಕು ಮಟ್ಟದ ಅಧ್ಯಕ್ಷರು, ಉಸ್ತುವಾರಿಗಳು, ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಬಡವರನ್ನು ಮೇಲೆತ್ತುವುದೇ ಇದರ ಉದ್ದೇಶ ಎಂದರು.
ದೇಶದಲ್ಲಿ ಹೆಣ್ಣು ಎಷ್ಟು ಸುರಕ್ಷಿತ ಎಂಬ ಆತಂಕ ಎದುರಾಗಿದೆ. ದಿನನಿತ್ಯ ಒಂದಲ್ಲಾ ಒಂದು ಘಟನೆಗಳು ನಡೆಯುತ್ತಿವೆ. ಸಮಾಜ ಸರ್ಕಾರಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕಿದೆ. ಪೋಷಕರ ಸ್ಥಾನದಲ್ಲಿ ನಿಂತು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಕಾನೂನುಗಳು ಗಟ್ಟಿಯಾಗಬೇಕು. ಅಪರಾಧಿಗಳನ್ನು ಸದೆ ಬಡಿಯಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಸಮಾಜದಲ್ಲಿ ತಾರತಮ್ಯ ತೊಲಗಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಮೋದಿ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿದೆ. ಆದರೆ ಅದು ಜಾರಿಯಾಗಿಲ್ಲ. ಶೀಘ್ರವಾಗಿ ಮೀಸಲು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಗ್ಯಾರಂಟಿ ಯೋಜನೆ ನಂಜನಗೂಡು ತಾಲ್ಲೂಕು ಅಧ್ಯಕ್ಷ ಮಾರುತಿ, ಮೈಸೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಪುಷ್ಪವಲ್ಲಿ ಇದ್ದರು.