Sunday, April 20, 2025
Google search engine

Homeಸ್ಥಳೀಯಪತ್ರಕರ್ತರಿಗೆ ವಿವಿಧ ಪ್ರಶಸ್ತಿ ಪ್ರದಾನ

ಪತ್ರಕರ್ತರಿಗೆ ವಿವಿಧ ಪ್ರಶಸ್ತಿ ಪ್ರದಾನ


ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ ಕೆ.ವಿ.ಶ್ರೀನಿವಾಸನ್(ಬ್ರದರ್) ಸಂಘದಲ್ಲಿ ಸ್ಥಾಪಿಸಿರುವ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಆರ್.ಸುವರ್ಣ ಅವರಿಗೆ ಮಹಾತ್ಮಗಾಂಧಿ ಪ್ರಶಸ್ತಿ, ಎಂ.ಎ.ಶ್ರೀರಾಮ್ ಅವರಿಗೆ ಜಾನಕಮ್ಮ ವೆಂಕಟಪ್ಪಗೌಡ ಪ್ರಶಸ್ತಿ, ಬೀಚನಹಳ್ಳಿ ಮಂಜುನಾಥ್ ಅವರಿಗೆ ಕೆ.ವಿ.ಶ್ರೀನಿವಾಸ್ ಪ್ರಶಸ್ತಿ, ಬಾಪುಲಿಂಗರಾಜ್ ಅರಸ್ ಅವರಿಗೆ ಜೆ.ಪಿ.ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಮೈಸೂರು ಆಕಾಶವಾಣಿಯ ನಿರ್ದೇಶಕ ಎಸ್.ಎಸ್.ಉಮೇಶ್ ಪ್ರದಾನ ಮಾಡಿದರು.
ನಂತರ ಮಾತನಾಡಿದ ಎಸ್.ಎಸ್.ಉಮೇಶ್ ಅವರು, ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರನ್ನು ಪೋಷಿಸುವುದಿರಲಿ, ಗುರುತಿಸುವ ಕೆಲಸವೂ ನಡೆಯುತ್ತಿಲ್ಲ. ಆದರೆ, ತಮ್ಮ ಪಾಡಿಗೆ ತಾವು ಕೆಲಸ ಮಾಡುವ ಪತ್ರಕರ್ತರನ್ನು ಗುರುತಿಸಿ ಬೆನ್ನು ತಟ್ಟುವುದರಿಂದಾಗಿ ಅವರಿಗೆ ಸ್ವಲ್ಪಮಟ್ಟಿಗಾದರೂ ಸಂತಸವಾಗುತ್ತದೆ. ಈ ನಿಟ್ಟಿನಲ್ಲಿ ಕೆ.ವಿ. ಶ್ರೀನಿವಾಸನ್ ಅವರು ಸಂಘದಲ್ಲಿ ಪ್ರಶಸ್ತಿ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು. ಉತ್ತಮ ಕರ್ತವ್ಯ ನಿರ್ವಹಿಸುವವರನ್ನು ಗುರುತಿಸುವ ಕಾರ್ಯವೂ ವ್ಯವಸ್ಥೆಗೆ ಹೊಸ ಚೈತನ್ಯ ನೀಡುತ್ತದೆ. ತಳಮಟ್ಟದ ಪತ್ರಕರ್ತರನ್ನು ಹೆಚ್ಚು ಗುರುತಿಸುವ ಕೆಲಸವಾಗಬೇಕು. ಜಿಲ್ಲಾ ಪತ್ರಕರ್ತರ ಬಗ್ಗೆ ಪುಸ್ತಕ ರಚಿಸುವ, ಆಕಾಶವಾಣಿಯಲ್ಲಿ ಕಾರ್ಯಕ್ರಮ ಮಾಡುವ ಆಲೋಚನೆಯಿದೆ ಎಂದರು. ಹಿರಿಯ ಪತ್ರಕರ್ತ ಡಿ.ಮಹದೇವಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉತ್ತಮ ಪತ್ರಕರ್ತರೂ ಕೂಡ ತಮ್ಮ ವೃತ್ತಿಯ ಹಾದಿಯಿಂದ ಸರಿದು, ಉದ್ಯೋಗ ಭದ್ರತೆ ಮತ್ತು ಅಧಿಕಾರ ಆಕಾಂಕ್ಷೆಗಳಿಂದ ಬೇರೆಡೆ ಸಾಗುತ್ತಿದ್ದಾರೆ. ಇಲ್ಲಿಯೂ ಗೌರವಯುತವಾಗಿ ಜೀವನ ನಡೆಸಬಹುದು, ಆದರೆ, ಕೆಲವೊಂದು ತ್ಯಾಗಗಳಂತೂ ಅನಿವಾರ್ಯ. ಕರ್ತವ್ಯ ಪ್ರೀತಿಯ ಮುಂದೆ ಇದು ದೊಡ್ಡದಲ್ಲ ಎಂಬುವುದನ್ನು ನಾವು ಅರಿಯಬೇಕು ಎಂದರು. ತಂತ್ರಜ್ಞಾನ ಬೆಳೆದಷ್ಟು ಕೆಲಸ ಸುಲಭವಾಗುತ್ತಿರುವುದರಿಂದ, ಇಂದಿನ ಪತ್ರಕರ್ತರಲ್ಲಿ ಕೆಲಸದ ಕುರಿತ ಬದ್ಧತೆ ಕಡಿಮೆಯಾಗುತ್ತಿದೆ. ಸ್ಥಳಕ್ಕೆ ತೆರಳುವ, ಆಳ ಅನುಭವ ಪಡೆದು ವರದಿಗಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸುದ್ದಿಯನ್ನು ಒಳಹೊಕ್ಕು, ಸ್ಥಳಕ್ಕೆ ತೆರಳಿ, ಸಂಶೋಧನೆ ರೀತಿಯಲ್ಲಿ ಸುದ್ದಿಗಳನ್ನು ಬರೆಯಬೇಕು ಎಂದು ಹೇಳಿದರು.
ಪ್ರಶಸ್ತಿ ಸ್ಥಾಪಕ ಕೆ.ವಿ.ಶ್ರೀನಿವಾಸ್ ಮಾತನಾಡಿ, ದೇಶವೂ ಕೇವಲ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಎಂಬ ಮೂರು ಕಾಲುಗಳಿಂದ ನಿಲ್ಲಲು ಸಾಧ್ಯವಿಲ್ಲ. ನಾಲ್ಕನೇ ಕಾಲು ಆದ ಮಾಧ್ಯಮ ಬೇಕು. ಆ ಕಾಲನ್ನು ಗಟ್ಟಿಗೊಳಿಸುವ ಕೆಲಸ ಪತ್ರಕರ್ತರು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular