ಚನ್ನಪಟ್ಟಣ: ರೈತರು ಉತ್ಪಾದಿಸುವ ಹಾಲಿಗೆ ೧ ಲೀ ಗೆ ೨.೮೦ ರೂ ಕಡಿತ ಮಾಡಿರುವ ಆದೇಶವನ್ನು ೧೫ ದಿನಗಳಲ್ಲಿ ವಾಪಸ್ ಪಡೆದು ಹಾಲು ಉತ್ಪಾದಕ ರೈತರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ೧ ಲೀ.ಗೆ ೧೦ ರೂ ಹೆಚ್ಚಳ ಮಾಡದಿದ್ದರೆ ಹೆದ್ದಾರಿಯಲ್ಲಿ ಜಾನುವಾರು ಕಟ್ಟಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಎಚ್ಚರಿಕೆ ನೀಡಿದರು.
ಬಮೂಲ್ ವತಿಯಿಂದ ಹಾಲು ಉತ್ಪಾದಕ ರೈತರಿಗೆ ೧ ಲೀ ಹಾಲಿಗೆ ಏಕಾಏಕಿ ೨.೮೦ ರೂ ಇಳಿಕೆ ಮಾಡಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ರೈತಪರ ಸಂಘಟನೆಗಳು ಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ರಾಜ್ಯದ ರೈತರಿಗೆ ಸಿಲ್ಕು-ಮಿಲ್ಕು ಎರಡೂ ಕಣ್ಣುಗಳಿದ್ದಂತೆ ಆದರೆ ಇದೀಗ ರೇಷ್ಮೆ ಗೂಡಿನ ಬೆಲೆ ಪಾತಾಳಕ್ಕೆ ಇಳಿದಿದೆ. ಇದೀಗ ರಾಜ್ಯದಲ್ಲಿ ದಿನಬಳಕೆ ವಸ್ತುಗಳು ಬೆಲೆ ಏರಿಕೆ ನಡುವೆ ರೈತರು ಕಷ್ಟ ಪಟ್ಟು ಉತ್ಪಾದಿಸುವ ಹಾಲಿಗೆ ಬಮೂಲ್‌ನಿಂದ ೨.೮೦ ರೂ ಇಳಿಕೆ ಮಾಡಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಹೈನುಗಾರಿಕೆಯಲ್ಲಿ ಬಳಸುವ ಪಶುಆಹಾರದ ಬೆಲೆ ಕಳೆದ ಆರು ತಿಂಗಳಿಂದ ಚೀಲಕ್ಕೆ ೨೦೦ ರೂ ವರೆಗೆ ಹೆಚ್ಚಾಗಿದೆ. ಜೊತೆಗೆ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರು ಯಾವುದೇ ಆದಾಯ ಇಲ್ಲದೆ ಬರಡು ರಾಸುಗಳನ್ನು ಸಾಕಾಣೆ ಮಾಡಲು ದಿನನಿತ್ಯ ೧ ಹಸುಗೆ ೨೦೦ ರೂ ವೆಚ್ಚ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಈಗಾಗಲೆ ಕೂಲಿಗಾಗಿ ಹೈನೋದ್ಯಮ ಮಾಡುತ್ತಿರುವ ರೈತರಿಗೆ ೨.೮೦ ರೂ ಕಡಿತ ಮಾಡಿದರೆ ರೈತರ ಕುಟುಂಬ ನಿರ್ವಹಣೆ ಮಾಡುವುದು ಸಾಧ್ಯವೇ ಎಂದು ರಮೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬಮೂಲ್‌ನಲ್ಲಿ ೬ ತಿಂಗಳಿಗೊಮ್ಮೆ ರೈತರು ಉತ್ಪಾದಿಸುವ ಹಾಲಿನ ದರ ಹೆಚ್ಚಳ ಮಾಡಲು ಸಭೆ ಮಾಡಬೇಕು ಆದರೆ ಬಮೂಲ್ ಏಕಾಏಕಿ ರೈತರ ಹಾಲಿನ ದರ ಇಳಿಕೆ ಮಾಡಿದೆ. ಬಮೂಲ್ ಕಳೆದ ತಿಂಗಳು ಉತ್ತರ ಕರ್ನಾಟಕದ ಭಾಗದಿಂದ ೨೮೦ ಮಂದಿ ನೌಕರರನ್ನು ಕೆಲಸಕ್ಕೆ ಪಡೆದಿದ್ದು, ಇದರಲ್ಲಿ ಪ್ರತಿಯೊಬ್ಬರಿಂದ ೩೦ ರಿಂದ ೫೦ ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪಗಳಿವೆ. ಬಮೂಲ್‌ಗೆ ಹಾಲು ಸರಬರಾಜು ಮಾಡುವ ಜಿಲ್ಲೆಯ ಹಾಲು ಉತ್ಪಾದಕ ರೈತರ ಮಕ್ಕಳಿಗೆ ಬಮೂಲ್‌ನಲ್ಲಿ ಶೇ. ೫೦ ರಷ್ಟು ಉದ್ಯೋಗ ನೀಡಬೇಕಿದೆ. ಆದರೆ ಜಿಲ್ಲೆಯ ರೈತರ ಮಕ್ಕಳಿಗೆ ಅನ್ಯಾಯ ಮಾಡಿರುವ ಬಮೂಲ್ ಜಿಲ್ಲೆಯ ರೈತರ ಹಾಲಿನ ದರ ಕಡಿತ ಮಾಡಿ ಅದನ್ನು ಬೇರೆಯವರಿಗೆ ವೇತನವಾಗಿ ನೀಡುತ್ತಿದ್ದಾರೆ. ಈ ಎಲ್ಲವೂ ಸರಿಯಾಗಿ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳ ರೈತರ ಮಕ್ಕಳಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹೊರ ರಾಜ್ಯದ ಕಂಪನಿಗಳ ಹಾಲು ಪೈಪೋಟಿಗೆ ಇಳಿದಿವೆ. ಈ ನಿಟ್ಟಿನಲ್ಲಿ ಕೆಎಂಎಫ್ ಸ್ಪರ್ಧಾತ್ಮಕ ದೃಷ್ಠಿಯಿಂದ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಬರಡು ರಾಸುಗಳಿಗೆ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಅವುಗಳು ಗರ್ಭದಾರಣೆ ಆಗಲು ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ೧೫ ದಿನದಲ್ಲಿ ಬಮೂಲ್ ನೀಡಿರುವ ಆದೇಶವನ್ನು ಹಿಂಪಡೆದು ರೈತರು ಉತ್ಪಾದಿಸುವ ಹಾಲಿಗೆ ೧ ಲೀ ಗೆ ೧೦ ರೂ. ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರು ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಜಾನುವಾರುಗಳನ್ನು ಕಟ್ಟಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರ ಹಾಗೂ ಬಮೂಲ್‌ಗೆ ಎಚ್ಚರಿಕೆ ನೀಡಿದರು.
ಕುಕ್ಕುಟ ಮಹಾಮಂಡಳ ರಾಜ್ಯಾಧ್ಯಕ್ಷ ಡಿ.ಕೆ.ಕಾಂತರಾಜು ಮಾತನಾಡಿ ರಾಜ್ಯಕ್ಕೆ ಹೆಚ್ಚು ಹಾಲು ಸರಬರಾಜು ಮಾಡುವ ನಮ್ಮ ಕ್ಷೇತ್ರದಲ್ಲಿ ರೈತರು ಹಾಲನ್ನು ಉತ್ಪಾದನೆ ಮಾಡಲು ಮುಂಜಾನೆ ೪ ಗಂಟೆಯಿಂದ ರಾತ್ರಿ ೭ ಗಂಟೆವರೆಗೆ ಶ್ರಮಿಸುತ್ತಾರೆ. ಆದರೆ ರೈತರಿಗೆ ಸಿಗುತ್ತಿರುವ ಹಣ ಯಾವುದೇ ಲಾಭದಾಯಕವಲ್ಲ ಅದು ರೈತರ ಕುಟುಂಬದ ದಿನದ ಕೂಲಿಯಾಗಿದೆ. ತಾಲೂಕಿನ ವಿರುಪಾಕ್ಷಿಪುರ ಹೋಬಳಿ ಭಾಗದಲ್ಲಿನ ಕಾಡಾನೆಗಳ ಹಾವಳಿಯಿಂದ ರೈತರು ಯಾವುದೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಭಾಗದ ರೈತರಿಗೆ ಹೈನುಗಾರಿಕೆ ಕೈ ಹಿಡಿದಿದ್ದು, ಬಮೂಲ್ ಹಾಲಿನ ದರ ಇಳಿಕೆ ಮಾಡುವ ಮೂಲಕ ರೈತರ ಕತ್ತು ಹಿಸುಕಿದೆ ಎಂದು ಕಿಡಿಕಾರಿದರು.

ರೈತರು ಶ್ರಮಿಸಿ ಉತ್ಪಾದಿಸುವ ಹಾಲಿಗೆ ಇರುವ ಬೆಲೆಯನ್ನು ಇಳಿಕೆ ಮಾಡಿರುವುದು ಖಂಡನೀಯವಾಗಿದೆ ಸರ್ಕಾರವು ಗ್ರಾಹಕರಿಗೆ ೫ ರೂ ಹಾಲಿನ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಬೇಕು ಇದರಿಂದ ರೈತರಿಗೆ ಅನುಕೂಲವಾಗಲಿದೆ. ೧ ಲೀ ಬಾಟಲಿ ನೀರಿಗೆ ೪೦ ರೂ ನೀಡಿ ಖರೀದಿಸುವ ಗ್ರಾಹಕರಿಗೆ ೧ ಲೀ ಹಾಲಿಗೆ ೫ ರೂ ಹೆಚ್ಚಳ ಮಾಡಿದರೆ ಯಾವುದೇ ಹೊರೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಆಗುವ ಬಗ್ಗೆ ಸಂಘಟನೆಗಳು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡೋಣ ಎಂದು ಇದಕ್ಕೆ ಚನ್ನಪಟ್ಟಣದಿಂದಲೇ ನಾಂದಿ ಹಾಡಲಾಗಿದ್ದು ಈ ಹೋರಾಟ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಬೇಕು ಎಂದು ಅಭಿಪ್ರಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷೆ ಶೋಭಾಅವರು ಮಾತನಾಡಿ, ರೈತರ ಬೆಳೆಯುವ ಯಾವುದೇ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೈತರನ್ನು ಹೈನುಗಾರಿಕೆ ಕೈ ಹಿಡಿದಿದ್ದು, ರೈತರು ಹೈನುಗಾರಿಕೆಯತ್ತ ಹೆಚ್ಚು ಒತ್ತು ನೀಡಿದ್ದಾರೆ. ಇದಕ್ಕಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಗ್ರಾಮೀಣ ಒಕ್ಕೂಟಗಳಿಂದ ಸಾಲ ಮಾಡಿ ಸಾವಿರು ರೂ ಮೌಲ್ಯದ ರಾಸು ತಂದು ಮೇವಿನ ಕೊರತೆಯ ನಡುವೆ ದುಪ್ಪುಟ್ಟು ಹಣ ನೀಡಿ ಮೇವು ಖರೀದಿಸಿ ಹೈನುಗಾರಿಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೀಡುವ ಹಾಲಿನ ಬೆಲೆಯನ್ನು ಕಡಿತ ಮಾಡಿದರೆ ಹಾಲಿನ ಬಿಲ್ ನಂಬಿ ಸಾಲ ಪಡೆದ ರೈತ ಮಹಿಳೆಯರು ಸ್ತ್ರೀಶಕ್ತಿ ಸಂಘಗಳಿಗೆ ಯಾವ ರೀತಿ ಸಾಲ ಮರುಪಾವತಿ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿ, ಬಮೂಲ್ ರೈತರಿಗೆ ೫ ರೂ. ಹಾಲಿನ ದರ ಹೆಚ್ಚಿಸಬೇಕು ಜೊತೆಗೆ ಸರ್ಕಾರವು ೫ ರೂ ಪ್ರೋತ್ಸಾಹ ದನವನ್ನು ೧೦ ಊಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಜಿಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಶೋಭಾ, ರಾಜ್ಯ ಉಪಧ್ಯಕ್ಷಗಳುರಾದ ರಂಜಿತ್‌ಗೌಡ, ಬೆಂಕಿ ಶ್ರೀಧರ್, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಮೊಗೇನಹಳ್ಳಿ ತಮ್ಮಣ್ಣಗೌಡ, ಸಿಇಒ ಹೊಂಗನೂರು ಪುಟ್ಟರಾಜು, ಸಿಂಗ್‌ರಾಜಿಪುರದ ಚಾಮರಾಜು, ಪುಟ್ಟರಾಜು, ಬೋರಣ್ಣ, ಕುಮಾರ್, ಯು.ಪಿ ಧರಣೀಶ್ ಬಿಜೆಪಿ ಮುಖಂಡ, ಜೆಡಿಎಸ್ ಮುಖಂಡ ಬೋರ್‌ವೆಲ್ ರಾಮಚಂದ್ರು, ಕನ್ನಡ ಪರ ಹೋರಾಟಗಾರ ಬಾಬ್‌ಜಾನ್, ಭೂಹಳ್ಳಿ, ತಿಮ್ಮೇಗೌಡ, ಪುಟ್ಟರಾಜು, ದೇವರಾಜು, ಬಾಬ್‌ಜಾಂ, ಬೋರ್ ವೆಲ್ ರಾಮಚಂದ್ರು, ಅಳಾಳಸಂದ್ರದ ಸೂಜೀವನ್ ಕುಮಾರ್, ಮಂಗಳವಾರ ಪೇಟೆಯ ಸತೀಶ್, ಪ್ರಕಾಶ್, ಚಿಕ್ಕೇನಹಳ್ಳಿ ಸಿದ್ದಪಾಜಿ, ರಾಜಮ್ಮ, ಮಂಗಳಮ್ಮ, ಹೊಟ್ಟಿಗನಹೊಸಹಳ್ಳಿ ರಮೇಶ್, ರಾಜಮ್ಮ, ರಾಜು, ನಾಗವಾರ ಜೈರಾಮ್, ಹನುಮಂತನಗರದ ಚಿಕ್ಕಣ್ಣಪ್ಪ, ವೆಂಕಟರಮಣ, ವಿರುಪಸಂದ್ರದ ಮಂಗಳಮ್ಮ, ನಾಗಮ್ಮ, ಯಶೋದಮ್ಮ, ಗೌರಮ್ಮ, ಆರೂರು ಪದ್ಮಮ್ಮ, ಪಾನಿಪುರ ಚನ್ನಪ್ಪ, ಕಡ್ಲೆಪುರಿ ಸಿದ್ದಪ್ಪ, ರೋಸಿ ನೀಲಮ್ಮ, ಚಿನ್ಮಯ್, ಕೋಟೆ ಚೇತು, ವಂದರಾಗುಪ್ಪೆ ರವಿ, ದಾಸೇಗೌಡ ವಂದಾರಗುಪ್ಪೆ, ವೆಂಕಟರಮಣಸ್ವಾಮಿ, ಕೆಂಡೇಗೌಡ್ರು ತಿಮ್ಮಸಂದ್ರ, ಚಿನ್ನಸ್ವಾಮಿ, ಕೋಡಂಬಹಳ್ಳೀ ರಾಜು, ಎಲೆಕೇರಿ ಬೋರೇಗೌಡ, ಇನ್ನೂ ಅನೇಕರು ಉಪಸ್ಥಿತರಿದ್ದರು.