ಯಳಂದೂರು: ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘದ ವತಿಯಿಂದ ಬುಧವಾರ ಕರೆಯಲಾಗಿದ್ದ ಕಾರ್ಯಕಾರಿ ಸಮಿತಿಯ ತುರ್ತುಸಭೆಯು ಕೋರಂನ ಕೊರತೆಯಿಂದ ಮುಂದೂಡಲ್ಪಟ್ಟ ಘಟನೆ ಜರುಗಿದೆ.
ಮಾಜಿ ಶಾಸಕ ಎಸ್. ಬಾಲರಾಜು ಅಧ್ಯಕ್ಷರಾಗಿರುವ ಈ ಸಂಘದಲ್ಲಿ ಉಪಾಧ್ಯಕ್ಷರಾಗಿ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿರವರ ಪುತ್ರ ಕುಸುಮರಾಜು ಸೇರಿದಂತೆ ೧೨ ಮಂದಿ ಚುನಾಯಿತ ಜನಪ್ರತಿನಿಧಿಗಳು, ಒಬ್ಬರು ನಾಮನಿರ್ದೇಶಿತ ಸದಸ್ಯರು ಹಾಗೂ ಒಬ್ಬರು ಸಿಂಡಿಕೇಟ್ ಸದಸ್ಯರೂ ಸೇರಿದಂತೆ ಒಟ್ಟು ೧೪ ಮಂದಿ ಸದಸ್ಯರು ಇದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಆಗಲೂ ಸಹ ಕೋರಂ ಇಲ್ಲದೆ ಆ ಸಭೆಯು ಮುಂದೂಡಲ್ಪಟ್ಟಿತು. ಸಭೆ ನಡೆಯಬೇಕಾದರೆ ಕನಿಷ್ಟ ೮ ಜನ ಸದಸ್ಯರು ಹಾಜರಿರಬೇಕು ಎಂಬ ನಿಯಮವಿದೆ. ಆದರೆ ಬುಧವಾರ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್. ಬಾಲರಾಜು, ನಿರ್ದೇಶಕರಾದ ವೈ.ಎಸ್. ನಂಜಶೆಟ್ಟಿ, ರಾಜಮ್ಮ, ಅಂಬಿಕಾ, ಬಿ.ಎಸ್. ನಾಗರಾಜು, ಮಹೇಶ್ ಕುಮಾರ್ ಬಂದಿದ್ದರು. ಆದರೆ ಅಗತ್ಯ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲಾಯಿತು ಎಂದು ಸಂಘದ ಕಾರ್ಯದರ್ಶಿ ಎನ್. ರಮೇಶ್ ಮಾಹಿತಿ ನೀಡಿದರು.