ದಾವಣಗೆರೆ : ಶಾಂತಯುತ, ಸೌಹಾರ್ಧ ಹಾಗೂ ಸಂಭ್ರಮದಿಂದ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಜನರಲ್ಲಿ ಮನವಿ ಮಾಡಿದರು.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧುವಾರ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರೀಕ ಸೌಹಾರ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣೇಶ ಚತುರ್ಥಿಯನ್ನು ಪ್ರತಿ ವರ್ಷದ ಆಚರಣೆಯಂತೆ ಹಾಗೂ ಸಾಂಪ್ರದಾಯಿಕವಾಗಿ ಈ ವರ್ಷವೂ ಆಚರಿಸಬೇಕು. ಸರ್ಕಾರ ಈಗಾಗಲೇ ಹಬ್ಬದ ಆಚರಣೆಗೆ ನಿರ್ದೇಶನಗಳನ್ನು ನೀಡಿದ್ದು, ಗಜಾನನ ಉತ್ಸವ ಸಮಿತಿಯವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು, ಪೆಂಡಾಲಗಳಲ್ಲಿ ಅವಘಡ ಸಂಭವಿಸದಂತೆ ಎಚ್ಚರವಹಿಸಬೇಕು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಬಾರದು. ಮೂರ್ತಿ ಪ್ರತಿಷ್ಠಾಪನೆಗೆ ಧ್ವನಿವರ್ಧಕಗಳ ಬಳಕೆಗೆ ಅಧಿಕೃತವಾಗಿ ಪರವಾನಗಿ ಪಡೆಯಬೇಕು. ಹಸಿರು ಪಟಾಕಿ ಬಳಸಿ. ಆಸ್ಪತ್ರೆ, ಶಾಲಾ, ಕಾಲೇಜು ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸುವಂತಿಲ್ಲ. ಮತ್ತು ಸುರಕ್ಷತೆ ದೃಷ್ಟಿಯಿಂದ ಪಟ್ಟಣದಾದ್ಯಂತ್ಯ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲಾಗುವುದು. ಗಣೇಶ ವಿಸರ್ಜನೆಗೆ ನಿಗಧಿ ಮಾಡುವ ರಸ್ತೆಯನ್ನು ಬದಲಿಸಬಾರದು. ನಿಗದಿತ ಸಮಯದಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದರು.
ಸಮಾಜ, ಕಾನೂನು, ದೇಶ , ಹಾಗೂ ಸಂವಿಧಾನ ಬಿಟ್ಟು ನಾವ್ಯಾರೂ ದೊಡ್ಡವರಲ್ಲ, ಆದ್ದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲ ವರ್ಗದ ಜನರು ವ್ಯವಸ್ಥೆಗೆ ಸಹಕರಿಸಿ ಪರಸ್ಪರ ಗೌರವ ಕೊಟ್ಟು ತಾವೆಲ್ಲರೂ ಶಾಂತಯುತವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಗಣೇಶ ಹಬ್ಬವನ್ನು ಶ್ರದ್ದಾಭಕ್ತಿ, ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಆಚರಿಸಬೇಕು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಬ್ಬಗಳ ಆಚರಣೆಯಲ್ಲಿ ದುಂದು ವೆಚ್ಚಗಳಿಗೆ ಅವಕಾಶ ನೀಡದೇ ಧಾರ್ಮಿಕತೆ ಸಾರುವಂತಿರಬೇಕು. ಭಾವೈಕ್ಯತೆ ಬಿತ್ತುವ ಮೂಲಕ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಚರಣೆ ಮಾಡಬೇಕು. ಇಂತಹ ಅವಕಾಶಗಳ ಬಳಕೆ ಮಾಡಿಕೊಂಡು ಶಾಂತಿ ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ಮೇಲೆ ಇಲಾಖೆ ಹೆಚ್ಚಿನ ನಿಗಾ ವಹಿಸುತ್ತದೆ, ಇಲಾಖಾ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋ?, ಮಂಜುನಾಥ್ ಹಾಗೂ ಇನ್ನಿತರೆ ಪೊಲೀಸ್ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.