ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಸುತ್ತಮುತ್ತ ಆಗಾಗ್ಗೆ ಓಡಾಡುತ್ತಿದ್ದ ಚಿರತೆ ಕೊನೆಗೂ ಸೆರೆಗೆ ಬಿದ್ದಿದೆ.
ಕಳೆದ ಒಂದು ತಿಂಗಳಿನಿಂದಲೂ ಕೂಡ ತಾಲೂಕಿನ ಲಕ್ಷ್ಮಿಪುರ, ಬೈಲಾಪುರ, ಚಿಕ್ಕನಾಯಕನಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆಯ ಓಡಾಟದಿಂದಾಗಿ ಜನರು ಭಯಭೀತಿ ಗೊಂಡಿದ್ದರು. ತಮ್ಮ ಜಮೀನುಗಳಲ್ಲಿ ದಿನನಿತ್ಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ರೈತರು, ಈ ಭಾಗದಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಜೀವ ಭಯದಿಂದಲೇ ಪ್ರತಿನಿತ್ಯ ತಿರುಗಾಡುತ್ತಿದ್ದರು.
ಈ ಭಾಗದ ಜನರು ಅರಣ್ಯ ಇಲಾಖೆಗೆ ಈ ಸಂಬಂಧ ಮಾಹಿತಿಯನ್ನು ನೀಡಿದ ಪರಿಣಾಮವಾಗಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಈ ಗ್ರಾಮಗಳ ಸುತ್ತಮುತ್ತ ಹಲವು ಕ್ಯಾಮರಾಗಳು ಮತ್ತು ಬೋನುಗಳನ್ನು ಅಳವಡಿಸಿ ಚಿರತೆಯ ಸೆರೆಗೆ ಬಲೆ ಬೀಸಿದ್ದರು.
ಆದರೆ ಇದುವರೆಗೂ ಯಾವುದೇ ಕ್ಯಾಮರಾ ಕಣ್ಣಿಗೆ ಬೀಳದ ಚಿರತೆ ವಿವಿಧೆಡೆ ಅಳವಡಿಸಿದ್ದ ಬೋನುಗಳ ಪೈಕಿ ಒಂದು ಬೋನಿಗೆ ಬುಧವಾರ ಮುಂಜಾನೆ ಓಡಾಡುವ ಸಂದರ್ಭದಲ್ಲಿ ಸಿಲುಕಿ ಸೆರೆಯಾಗಿದೆ.
ಚಿರತೆಯು ಕಾಣಿಸಿಕೊಳ್ಳುತ್ತಿದ್ದರಿಂದ ಭಯದಿಂದ ಓಡಾಡುತ್ತಿದ್ದ ಜನರು ಚಿರತೆಯ ಸೆರೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯವರಿಗೆ ಈ ಭಾಗದ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದು ಸೆರೆಯಾದ ಚಿರತೆಯನ್ನು ತಾಲೂಕು ವಲಯ ಅರಣ್ಯಧಿಕಾರಿ ಮಿರ್ಲೆ ಎಂ.ಆರ್ ರಶ್ಮಿ,
ಉಪ ಅರಣ್ಯಾಧಿಕಾರಿ ಪ್ರಶನ್ನ ಮತ್ತು ಗಸ್ತು ಅಧಿಕಾರಿ ಸುನೀಲ್ ನೇತೃತ್ವದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು