ನವದೆಹಲಿ: ಪಾಸ್‌ಪೋರ್ಟ್ ಅರ್ಜಿಗಳ ನಿರ್ವಹಣೆ ಮಾಡುವ ಆನ್‌ಲೈನ್ ಪೋರ್ಟಲ್ ತಾಂತ್ರಿಕ ನಿರ್ವಹಣೆ ಕಾರಣ ಆ .29 ಗುರುವಾರ ರಾತ್ರಿ 8 ಗಂಟೆಯಿಂದ ಸೆ.2 ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಅಪಾಯಿಂಟ್‌ಮೆಂಟ್‌ಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಮೊದಲು ಕಾಯ್ದಿರಿಸಿದ ಎಲ್ಲಾ ಅಪಾಯಿಂಟ್‌ಮೆಂಟ್‌ಗಳನ್ನು ಮರು ನಿಗದಿಪಡಿಸಲಾಗುವುದು ಎಂದು ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ ಅಡ್ವೈಸರಿ ಎಕ್ಸ್ (X) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.
ಈ ಅವಧಿಯಲ್ಲಿ ನಾಗರಿಕರಿಗೂ ಹಾಗೂ ಎಲ್ಲಾ ಎಂಇಎ, ಆರ್‌ಪಿಓ, ಬಿಓಐ, ಐಎಸ್‌ಪಿ, ಡಿಓಪಿ, ಪೊಲೀಸ್ ಅಧಿಕಾರಿಗಳಿಗೆ ಸಿಸ್ಟಮ್‌ಗಳು ಲಭ್ಯವಿರುವುದಿಲ್ಲ. ಆ.30 ರವರೆಗೆ ಬುಕ್ಕಿಂಗ್ ಆಗಿರುವ ಎಲ್ಲಾ ಅಪಾಯಿಂಟ್‌ಮೆಂಟ್‌ಗಳನ್ನು ಮರು ನಿಗದಿಪಡಿಸಲಾಗುವುದು ಎಂದು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಇದೊಂದು ದೈನಂದಿನ ಪ್ರಕ್ರಿಯೆಯಾಗಿದೆ. ಸಾರ್ವಜನಿಕರ ಸೇವೆಗಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಮುಂಚಿತವಾಗಿ ಯೋಜಿಸಲಾಗಿದೆ ಮತ್ತು ಈ ನಿರ್ವಹಣಾ ಚಟುವಟಿಕೆಯೂ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಯನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಅಪಾಯಿಂಟ್‌ಮೆಂಟ್‌ಗಳ ಮರುನಿಗದಿ ಕಾರ್ಯವು ಯಾವುದೇ ಸವಾಲನ್ನು ಉಂಟು ಮಾಡುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪಾಸ್‌ಪೋರ್ಟ್ ಸೇವಾ ಪೋರ್ಟಲ್ ದೇಶಾದ್ಯಂತ ಹೊಸ ಪಾಸ್‌ಪೋರ್ಟ್ಗೆ ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಅಪಾಯಿಂಟ್‌ಮೆಂಟ್‌ಗಳ ನಿಗದಿಗಾಗಿ ಕಾರ್ಯನಿರ್ವಹಿಸುತ್ತದೆ. ಅಪಾಯಿಂಟ್‌ಮೆಂಟ್ ದಿನದಂದು ಅರ್ಜಿದಾರರು ಪಾಸ್‌ಪೋರ್ಟ್ ಕೇಂದ್ರಗಳಿಗೆ ಹೋಗಿ, ದಾಖಲೆಗಳನ್ನು ಒದಗಿಸಬೇಕು ನಂತರ ಪೊಲೀಸ್ ಪರಿಶೀಲನೆಯ ನಂತರ 30 ರಿಂದ 45 ದಿನಗಳಲ್ಲಿ ಪಾಸ್‌ಪೋರ್ಟ್ ಅರ್ಜಿದಾರರರ ವಿಳಾಸಕ್ಕೆ ತಲುಪುತ್ತದೆ ಎಂದು ತಿಳಿಸಿದೆ.