ರಾಮನಗರ: ಜಿಲ್ಲೆಯಲ್ಲಿ ಜಾತಿ ಆಧಾರದ ಮೇಲೆ ಸ್ಮಶಾನಕ್ಕಾಗಿ ಭೂಮಿಯನ್ನು ಒದಗಿಸುವುದಿಲ್ಲ ಬದಲಿಗೆ ಸಾರ್ವಜನಿಕ ಸ್ಮಶಾನವನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದರು.
ಅವರು ಆ. ೨೯ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ-೨೦೧೫ರ ಅನುಷ್ಠಾನ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ೧೦೦೦ ಜನಸಂಖ್ಯೆಗೆ ೧೮ ಗುಂಟೆ ಜಾಗವಷ್ಟೇ ಸಾರ್ವಜನಿಕ ಸ್ಮಶಾನಕ್ಕಾಗಿ ಪ್ರತಿ ಗ್ರಾಮಕ್ಕೆ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ಸ್ಥಳದ ಸಮಸ್ಯೆ ಇರುವುದಿಲ್ಲ. ಯಾವುದಾದರು ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲಾಗುವುದು ಹಾಗೂ ಒಂದು ವೇಳೆ ಸಾರ್ವಜನಿಕವಾಗಿ ಗುರುತಿಸಲಾದ ಸ್ಮಶಾನ ಜಾಗದಲ್ಲಿ ಅನ್ಯ ಜಾತಿಯರಿಗೆ ಜಾಗ ನೀಡಲು ನಿರಾಕರಿಸಿದರೆ ಅಂತಹವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಸ್ಮಶಾನಗಳಿಗೆ ಸರ್ವೆ ಮಾಡಿಸಬೇಕು, ಗಡಿ ಗುರುತುಹಾಕಬೇಕು, ಸ್ಮಶಾನವನ್ನು ಸಂಪರ್ಕಿಸುವ ಹಾಗೂ ಸಾರ್ವಜನಿಕರು ಓಡಾಡುವ ರಸ್ತೆ ಇರಬೇಕು ಮತ್ತು ಸಾರ್ವಜನಿಕ ಸ್ಮಶಾನ ಎಂಬ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ತಹಶೀಲ್ದಾರು ಕ್ರಮವಹಿಸುವಂತೆ ಅವರು ಸೂಚಿಸಿದರು.
ದೌರ್ಜನ್ಯದಲ್ಲಿ ಕೊಲೆ/ಮರಣ ಹೊಂದಿದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಕುಟುಂಬದ ಅವಲಂಬಿತರುಗಳಿಗೆ ಪರಿಹಾರ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ, ಪಿಂಚಣಿ, ನೊಂದ ಸಂತ್ರಸ್ತರುಗಳ ಮಕ್ಕಳಿಗೆ ವಸತಿ ಶಾಲೆಯ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಕೃಷಿ ಭೂಮಿ ಮಂಜೂರು ಮಾಡಲಾಗುವುದು. ಈ ನಿಯಮದಲ್ಲಿ ಯಾವುದೇ ವಿಳಂಬ ಇರುವುದಿಲ್ಲವೆಂದು, ಮರಣ ಹೊಂದಿದ ಅವಲಂಬಿತರಿಗೆ ೨೪ ಗಂಟೆಯೊಳಗೆ ಪರಿಹಾರ ನೀಡಲಾಗುವುದು. ಜಾತಿ ಪ್ರಮಾಣ ಪತ್ರವನ್ನು ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳು ನಿಗದಿತ ಸಮಯದೊಳಗೆ ವಿತರಿಸಬೇಕು ಎಂದು ತಿಳಿಸಿದರು.
ಸಮಿತಿಯ ಸದಸ್ಯರಾದ ಚೆಲುವರಾಜು ಅವರು ಮಾತನಾಡಿ, ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಜನರಿದ್ದು ಅವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅವರ ಜಮೀನಿಗೆ ಪೌತಿ ಖಾತೆ ಆಗುತ್ತಿಲ್ಲ. ಆದುದರಿಂದ ಆ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದರು. ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಪ್ರದೇಶವು ಅರಣ್ಯ ವಲಯಕ್ಕೆ ಸೇರಿವುದರಿಂದ ಅರಣ್ಯ ವಲಯದಿಂದ ಈ ಪ್ರದೇಶವನ್ನು ಜನವಸತಿ ಪ್ರದೇಶವಾಗಿ ಮಾಡಲು ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಮಿತಿಯ ಸದಸ್ಯರಾದ ರೋಹಿತ್ ಅವರು ಮಾತನಾಡಿ, ಚನ್ನಪಟ್ಟಣದ ಎಸ್.ಎಂ. ಹಳ್ಳಿ ಗ್ರಾಮದಲ್ಲಿ ಕೆರೆಗೆ ಹೊಂದಿಕೊಂಡಂತೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ ಎಂದು ತಿಳಿಸಿದರು. ಜೀವಿತ ಕೆರೆಗಳಲ್ಲಿ ಸ್ಮಶಾನಕ್ಕೆ ಜಾಗವನ್ನು ನೀಡಲು ಅವಕಾಶವಿರುವುದಿಲ್ಲ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮವಹಿಸುವಂತೆ ಚನ್ನಪಟ್ಟಣ ತಹಶೀಲ್ದಾರರವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ಅವರು ಮಾತನಾಡಿ, ಮಾಗಡಿಯಲ್ಲಿರುವ ನಗರಸಭೆಯ ಮಳಿಗೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುತ್ತಿಲ್ಲವೆಂದು ತಿಳಿಸಿದರು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮಾಗಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
೫೬೦ ಉಪ ಗ್ರಾಮಗಳನ್ನು ನಿರ್ಮಿಸುತ್ತಿದ್ದು ಇದು ರಾಜ್ಯದಲ್ಲಿ ಮೊದಲ ಜಿಲ್ಲೆಯಾಗಿದೆ, ಇವು ಗ್ರಾಮ ಠಾಣಾ ವ್ಯಾಪ್ತಿಗೆ ಸೇರದೆ ಇರುವ ಸರ್ಕಾರದ ಜಮೀನು ಮತ್ತು ಸರ್ವೇ ನಂಬರ್ ಗಳನ್ನು ಹೊಂದಿರುವಂತಹ ಗ್ರಾಮಗಳನ್ನು ಉಪ ಗ್ರಾಮಗಳೆಂದು ಘೋಷಿಸಿ ಅವುಗಳಿಗೆ ಇ-ಖಾತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ-೨೦೧೫ರ ಅನುಷ್ಠಾನ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಹೊಸ ಸದಸ್ಯರುಗಳಾದ ಚೆಲುವರಾಜು , ಬಾಬು, ಗೋಪಾಲಕೃಷ್ಣ, ಶಿವರಾಜು, ಶಿವಕುಮಾರ್, ಮಹೇಶ್ ಮತ್ತು ರೋಹಿತ್ ರವರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ದಿಗ್ವಿಜಯ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಕೆ. ಚಂದ್ರಯ್ಯ ಉಪವಿಭಾಗಾಧಿಕಾರಿ ಬಿನೋಯ್, ರಾಮನಗರ ಡಿವೈಎಸ್‌ಪಿ ದಿನಕರ್ ಶೆಟ್ಟಿ, ಎಲ್ಲಾ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ನಗರಸಭೆ/ಪುರಸಭೆ ಮುಖ್ಯಸ್ಥರುಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.