ಬೆಂಗಳೂರು: ಗ್ರಾಹಕರು ಬಿಲ್‌ಗಳನ್ನು ಸ್ವೀಕರಿಸಿದ ೩೦ ದಿನಗಳಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸಲು ವಿಫಲವಾದರೆ ಅಥವಾ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ಸೆಪ್ಟೆಂಬರ್ ೧ ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಶುಕ್ರವಾರ ತಿಳಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ(ಕೆಇಆರ್‌ಸಿ) ಶಿಫಾರಸಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ ೧ ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಬೆಸ್ಕಾಂ ತಿಳಿಸಿದೆ. ಮನೆ ಬಳಕೆ ಮತ್ತು ವಾಣಿಜ್ಯ ಬಳಕೆ ಗ್ರಾಹಕರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಬಿಲ್‌ಗಳನ್ನು ನಿಗದಿತ ೩೦ ದಿನಗಳಲ್ಲಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬೆಸ್ಕಾಂ ಹೇಳಿದೆ.
೩೦ ದಿನಗಳಲ್ಲಿ ಬಿಲ್ ಪಾವತಿಸಲು ವಿಫಲವಾದರೆ ಮೀಟರ್ ರೀಡಿಂಗ್ ದಿನದಂದು ಸಂಪರ್ಕ ಕಡಿತಗೊಳ್ಳುತ್ತದೆ. ಈ ಅನಾನುಕೂಲತೆಯನ್ನು ತಪ್ಪಿಸಲು ಎಲ್ಲಾ ಗ್ರಾಹಕರು ತಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಎಂದು ಬೆಸ್ಕಾಂ ಕೇಳಿಕೊಂಡಿದೆ. ಪ್ರಸ್ತುತ, ಪ್ರತಿ ತಿಂಗಳ ಮೊದಲ ೧೫ ದಿನಗಳಲ್ಲಿ ಮೀಟರ್ ರೀಡಿಂಗ್ ನಂತರ, ಮೀಟರ್ ರೀಡರ್‌ಗಳು, ಲೈನ್‌ಮ್ಯಾನ್‌ಗಳು, ಬಾಕಿ ಬಿಲ್‌ಗಳಿರುವ ಗ್ರಾಹಕರ ಮನೆಗೆ ತಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮತ್ತೊಮ್ಮೆ ಭೇಟಿ ನೀಡುತ್ತಿದ್ದರು. ಆದರೆ ಸೆಪ್ಟೆಂಬರ್ ೧ ರಿಂದ ಮೀಟರ್ ರೀಡರ್‌ಗಳೊಂದಿಗೆ ಬರುವ ಲೈನ್‌ಮೆನ್‌ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.
ಬಡ್ಡಿ ರಹಿತವಾಗಿ ನಿಗದಿತ ದಿನಾಂಕದವರೆಗೆ ವಿದ್ಯುತ್ ಬಿಲ್ ಪಾವತಿಗೆ ೧೫ ದಿನಗಳ ಕಾಲಾವಕಾಶ ನೀಡಲಾಗಿದ್ದು, ನಿಗದಿತ ದಿನಾಂಕದ ನಂತರ ಬಡ್ಡಿ ಸಹಿತ ಪಾವತಿಗೆ ಹೆಚ್ಚುವರಿ ೧೫ ದಿನಗಳ ಕಾಲಾವಕಾಶವಿದೆ ಎಂದು ವಿದ್ಯುತ್ ಕಂಪನಿ ತಿಳಿಸಿದೆ.
ಆದಾಗ್ಯೂ, ಬಿಲ್ ಪಾವತಿಸದೇ ಇದ್ದರೆ, ಮುಂದಿನ ಮೀಟರ್ ರೀಡಿಂಗ್ ದಿನದಂದು ವಿದ್ಯುತ್ ಸಂಪರ್ಕ ಕಡಿತಗೊಳಿಸ ಲಾಗುತ್ತದೆ. ಹೆಚ್ಚುವರಿ ಭದ್ರತಾ ಠೇವಣಿ ಸೇರಿದಂತೆ ಬಾಕಿ ಮೊತ್ತ ೧೦೦ ರೂ. ಮೀರಿದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.