ವಿಜಯಪುರ: ಈ ಹಿಂದೆ ೨ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲ. ಹೀಗಾಗಿ ಆಪರೇಷನ್ ಕಮಲ ಎಂಬುದು ಹೊಸತೇನಲ್ಲ. ಈಗಲೂ ಅಂತಹ ಪ್ರಯತ್ನ ನಡೆಸಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಕಿಡಿಕಾರಿದರು.
ಇಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ ಹಗರಣದ ಆರೋಪ ಹೊರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಸಮರ್ಥನೀಯವಲ್ಲ. ಎರಡು ಬಾರಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿರುವ ಬಿಜೆಪಿ, ಮತ್ತದೇ ಪ್ರಯತ್ನ ನಡೆಸಿದೆ. ರಾಜ್ಯಪಾಲರ ನಡೆ ಖಂಡಿಸಿ ಇಂದು ರಾಜಭವನ ಚಲೋ ಹೋರಾಟದಲ್ಲಿ ನಾನೂ ಹಾಜರಾಗಬೇಕಿತ್ತು. ಆದರೆ ಆರ್‌ಬಿಐ ನಿಯಮದ ಅನುಸಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯುತ್ತಿರುವುದರಿಂದ ಅನುಮತಿ ಪಡೆದು ವಿಜಯಪುರಕ್ಕೆ ಬಂದಿದ್ದೇನೆ ಎಂದರು.
ರಾಜ್ಯಪಾಲರ ಮುಂದೆ ಹಲವು ಕಡತಗಳು ಬಾಕಿ ಇದ್ದು, ಮೊದಲು ಅಂಥ ಆರೋಪದ ಪ್ರಕರಣದ ಕುರಿತು ತೀರ್ಮಾನವಾಗಲಿ. ಆದರೆ ಈಗಷ್ಟೇ ನೀಡಿದ ದೂರಿನ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಕಿಡಿ ಕಾರಿದರು.