ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶ್ರಾವಣ ಮಾಸದ ಕೊನೆಯ ೪ನೇ ಶ್ರಾವಣ ಶನಿವಾರವಾದ ಹಿನ್ನೆಯಲ್ಲಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರೀ ಕ್ಷೇತ್ರವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿರುವ ಶ್ರೀರಾಮನ ದೇವಾಲಯದಲ್ಲಿ ಕೊನೆಯ ಶ್ರಾವಣ ಶನಿವಾರವನ್ನು ಭಕ್ತಿಭಾವದಿಂದ ನವವಿವಾಹಿತರು ಹಾಗೂ ಭಕ್ತರು ವಿಶೇಷ ಪೂಜೆಪುನಸ್ಕಾರದೊಂದಿಗೆ ಮುಡಿ, ಉತ್ಸವ ಸೇವೆ, ಇನ್ನಿತರ ಹರಕೆ ತೀರಿಸಿ ಪ್ರಸಾದ ವಿನಿಯೋಗ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಅರ್ಚಕ ವೃಂದ ಶ್ರೀರಾಮ ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿಗೆ ಕ್ಷೀರಾಭಿಷೇಕ, ಸೇರಿದಂತೆ ಪಂಚಾಮೃತಭಿಷೇಕ ವಿಶೇಷ ಅರ್ಚನೆ ಹೋಮ ಹವನಗಳು ಹಾಗೂ ಇನ್ನಿತರ ಕೈಂಕಾರ್ಯಗಳನ್ನು ಕೈಗೊಂಡರು.
ನಂತರ ದೇವರ ಮೂರ್ತಿಗಳಿಗೆ ಹಲವು ಬಗೆಯ ಹೂವಿನಿಂದ ಅಲಂಕಾರ ಮಾಡಿದ ಪ್ರಧಾನ ಅರ್ಚಕ ನಾರಾಯಣ ಅಯ್ಯಂಗಾರ್ ಹಾಗೂ ವಾಸುದೇವನ್ ಭಕ್ತರ ಸಮ್ಮುಖದಲ್ಲಿ ದೇವರಿಗೆ ಪ್ರಸಾದ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು.
ನಾನಾ ಭಾಗಗಳಿಂದ ಬಂದಿದ ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ಸಂಜೆವರೆಗೂ ಸರತಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣುಕಾಯಿ ನೀಡಿ ಶ್ರದ್ಧಾಭಕ್ತಿಯಿಂದ ಮನದಲ್ಲೇ ನಮಿಸುತ್ತ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತಿಯಿಂದ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡರು.
ಇನ್ನು ಶ್ರೀರಾಮ, ಲಕ್ಷ್ಮಣ, ಸೀತಾ ಉತ್ಸವ ಮೂರ್ತಿಗಳಿದ್ದ ಚಿಕ್ಕ ರಥಕ್ಕೆ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಬಳಿಕ. ಗ್ರಾಮ ಸೇರಿದಂತೆ ಜಿಲ್ಲೆಯ ಇನ್ನಿತರ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಸಮೂಹ ಗೋವಿಂದಾ..! ಗೋಪಾಲ ಗೋಪಾಲ ಗೋವಿಂದಾ..! ಎಂಬ ಶ್ರೀರಾಮ ನಾಮ ಪಠಿಸುತ್ತ ರಥವನ್ನು ಒಂದು ಸುತ್ತು ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು. ಧಾರ್ಮಿಕ ದತ್ತಿ ಇಲಾಖೆ ಹಾಗೂ ಭಕ್ತರ ಸಹಕಾರದೊಂದಿಗೆ ಸಂಜೆವರೆಗೂ ಬರುವ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿತ್ತು

ಸಂಚಾರಕ್ಕೆ ಕಿರಿಕಿರಿ: ಭಕ್ತರ ವಾಹನಗಳಿಗೆ ಸೂಕ್ತ ಜಾಗದಲ್ಲಿ ವಾಹನ ನಿಲುಗಡೆ ಮಾಹಿತಿ ನೀಡದ ಕಾರಣ ಮುಖ್ಯ ರಸ್ತೆಗಳಲ್ಲಿ ಎಲ್ಲಂದರಲ್ಲಿ ವಾಹನ ನಿಲುಗಡೆಯಿಂದ ಸಂಚಾರಕ್ಕೆ ಕಿರಿ-ಕಿರಿ ಉಂಟಾಗಿತ್ತು.
ಹನುಮಂತನಿಗಿಲ್ಲ ಪೂಜೆ: ಶಿಲ್ಪಿ ಅರುಣ್ ಯೋಗಿರಾಜ್ ಅವರ ಕರ ಕೆತ್ತನೆಯಲ್ಲಿ ದೇಗುಲದ ಆವರಣದಲ್ಲಿ ಅರಳಿರುವ ಏಕಶಿಲಾ ಹೊಯ್ಸಳ ಶೈಲಿಯ ಹನುಮಂತನ ಮೂರ್ತಿಗೆ ವಿಶೇಷ ದಿನದಲ್ಲಾದರು ಒಂದು ಹೂವಿನ ಹಾರ ಅಥವಾ ಒಂದೆರಡು ಮೊಳ ಹೂ ಹಾಕಿ ಪೂಜೆ ಮಾಡಿದೆ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ತಾಲೂಕು ಮತ್ತು ಜಿಲ್ಲಾಡಳಿದ ವಿರುದ್ಧ ತೀವ್ರ ಆಕ್ರೋಶಕ್ಕೂ ಕಾರಣವಾಯಿತು.